ಜುಲೈ 1 ರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ(Commercial LPG Cylinder) ಬೆಲೆಯನ್ನು 198 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಇತ್ತೀಚಿನ ಕಡಿತದೊಂದಿಗೆ, ದೆಹಲಿಯಲ್ಲಿ(New Delhi) 19 ಕೆಜಿ ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್‌ನ ಬೆಲೆ ಈಗ 2,021 ರೂ. ಆಗಲಿದೆ. ಇದು ಹೋಟೆಲ್ಗಳು, ತಿನಿಸುಗಳು, ಟೀ ಸ್ಟಾಲ್‌ಗಳು ಮತ್ತು 19 ಕೆಜಿ ಸಿಲಿಂಡರ್‌ಗಳ ಅತಿದೊಡ್ಡ ಬಳಕೆದಾರರ ವಿಭಾಗವನ್ನು ಹೊಂದಿರುವ ಇತರರಿಗೆ ಕೊಂಚ ಮಟ್ಟದ ರಿಲೀಫ್ ನೀಡಲಿದೆ.
ಕಳೆದ ತಿಂಗಳು ಜೂನ್ 1 ರಂದು ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 2219 ರೂ.ಗೆ ಏರಿಕೆಗೊಂಡಿತ್ತು. ಇದಕ್ಕೂ ಮುನ್ನ ಮೇ ಮೊದಲ ವಾರದಲ್ಲಿ 19 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 50 ರೂ. ಏರಿಕೆಯಾಗಿತ್ತು. ಮೇ 1 ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 102.50 ರೂ.ಗಳಷ್ಟು ಹೆಚ್ಚಿಸಿ, 2355.50 ರೂ.ಗೆ ಬಂದು ನಿಂತಿತ್ತು. ಏಪ್ರಿಲ್ ಮತ್ತು ಮಾರ್ಚ್‌ನಲ್ಲಿ ಸಹ 19 ಕೆಜಿ ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು 250 ರೂ.ಗೆ ದಿಢೀರ್ ಏರಿಕೆ ಮಾಡಲಾಗಿತ್ತು.
ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಸಿಕ ಪರಿಷ್ಕರಿಸಲಾಗುತ್ತದೆ ಎಂಬ ಮಾಹಿತಿ ಸದ್ಯ ಪ್ರಕಟವಾಗಿದೆ. ಈಗ ದೆಹಲಿಯಲ್ಲಿ ಕಡಿತಗೊಂಡಿದ್ದು, ಉಳಿದ ರಾಜ್ಯಗಳಲ್ಲಿ ಯಾವಾಗ ಚಾಲ್ತಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.