- ಬಳ್ಳಾರಿಯಲ್ಲಿ ಮೃತ ರಾಜಶೇಖರ್ ರೆಡ್ಡಿ ಕುಟುಂಬಕ್ಕೆ (Complaint against Jameer Ahmed) ನಗದು ರೂಪದಲ್ಲಿ ಪರಿಹಾರ ವಿತರಿಸಿದ ಆರೋಪ
- ನಗದು ವಿತರಣೆಗೆ ಕಾನೂನು ಸಂಕಷ್ಟ: ಜಮೀರ್ ಅಹಮದ್ ಖಾನ್ ವಿರುದ್ಧ ಐಟಿ ಇಲಾಖೆಗೆ ದೂರು
- ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ST ಉಲ್ಲಂಘನೆ ಆರೋಪಿಸಿ ದೂರು ಸಲ್ಲಿಕೆ
ಬಳ್ಳಾರಿ ಜಿಲ್ಲೆಯಲ್ಲಿನ ರಾಜಕೀಯ ಘರ್ಷಣೆಯೊಂದರಲ್ಲಿ (Complaint against Jameer Ahmed) ಮೃತಪಟ್ಟ ರಾಜಶೇಖರ್ ರೆಡ್ಡಿ (Rajasekhar Reddy) ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರವನ್ನು ನಗದು ರೂಪದಲ್ಲೇ ವಿತರಿಸಿರುವ ಆರೋಪದ ಮೇಲೆ ರಾಜ್ಯದ ವಸತಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ವಿರುದ್ಧ ಆದಾಯ ತೆರಿಗೆ ಇಲಾಖೆಗೆ ಲಿಖಿತ ದೂರು ಸಲ್ಲಿಕೆಯಾಗಿದೆ.
ಈ ದೂರುವನ್ನು ಹಿಂದೂ ಸಂಘಟನೆಗಳ ಮುಖಂಡ ತೇಜಸ್ ಗೌಡ (Tejas Gowda) ಸಲ್ಲಿಸಿದ್ದು, ಇದು ಆದಾಯ ತೆರಿಗೆ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಎಂದು ಅವರು ಆರೋಪಿಸಿದ್ದಾರೆ.

ಜನವರಿ 1ರಂದು ಬಳ್ಳಾರಿಯಲ್ಲಿ ನಡೆದ ಈ ಘಟನೆ ಇದೀಗ ರಾಜ್ಯ ರಾಜಕೀಯ (Complaint against Jameer Ahmed) ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಆಡಳಿತಾತ್ಮಕ ನಿಯಮಗಳ ಪಾಲನೆ ಕುರಿತಂತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಜನವರಿ 1ರಂದು ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ನಿವಾಸದ ಬಳಿ ನಡೆದ ಹಿಂಸಾತ್ಮಕ ಘಟನೆಯಲ್ಲಿ ರಾಜಶೇಖರ್ ರೆಡ್ಡಿ ಎಂಬ ಯುವಕ ಹತ್ಯೆಯಾಗಿದ್ದನು.
ಈ ದುರ್ಘಟನೆಯ ನಂತರ ಮೃತನ ಕುಟುಂಬಕ್ಕೆ ಸರ್ಕಾರದ ಪರವಾಗಿ ಪರಿಹಾರ ನೀಡಲಾಗಿತ್ತು.
ಆದರೆ ಸಚಿವ ಜಮೀರ್ ಅಹಮದ್ ಖಾನ್ ಅವರು 25 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಸಂಪೂರ್ಣವಾಗಿ ನಗದು ರೂಪದಲ್ಲೇ, ಬಟ್ಟೆ ಬ್ಯಾಗ್‌ನಲ್ಲಿ ಮುಚ್ಚಿ ರಾಜಶೇಖರ್ ರೆಡ್ಡಿಯ ತಾಯಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.
ಈ ಹಣ ವಿತರಿಸುವ ದೃಶ್ಯಗಳು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದು, ಪತ್ರಿಕೆಗಳಲ್ಲಿಯೂ ನಗದು ವಿತರಣೆ ಸಂಬಂಧಿಸಿದ ಫೋಟೋಗಳು ಪ್ರಕಟವಾಗಿವೆ.
ಈ ಬೆಳವಣಿಗೆಯೇ ಈಗ ಕಾನೂನು ಹಾಗೂ ತೆರಿಗೆ ನಿಯಮಗಳ ಉಲ್ಲಂಘನೆ ಆರೋಪಕ್ಕೆ ದಾರಿ ಮಾಡಿಕೊಟ್ಟಿದೆ.
ಇನ್ನು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ST ಪ್ರಕಾರ, 2017–18ರಿಂದ ಜಾರಿಗೆ ಬಂದ ನಿಯಮದಂತೆ ಒಬ್ಬ ವ್ಯಕ್ತಿ ಮತ್ತೊಬ್ಬರಿಗೆ ಒಂದು ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ನೀಡುವಂತಿಲ್ಲ.
2 ಲಕ್ಷ ರೂಪಾಯಿಗಿಂತ ಹೆಚ್ಚಿನ ಯಾವುದೇ ಹಣಕಾಸು ವ್ಯವಹಾರಗಳನ್ನು ಕಡ್ಡಾಯವಾಗಿ ಬ್ಯಾಂಕ್ ಮುಖಾಂತರ — ಅಂದರೆ ಚೆಕ್, ಡಿಮಾಂಡ್ ಡ್ರಾಫ್ಟ್ (Demand Draft) ಅಥವಾ ಆನ್‌ಲೈನ್ ವರ್ಗಾವಣೆಯ ಮೂಲಕವೇ ನಡೆಸಬೇಕು.
ಈ ನಿಯಮದ ಉದ್ದೇಶ ಕಪ್ಪು ಹಣದ ಹರಿವನ್ನು ತಡೆಯುವುದು ಹಾಗೂ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರುವುದು.
ಆದರೆ ಈ ನಿಯಮಗಳನ್ನೆಲ್ಲ ಮೀರಿ, ಸಚಿವರು 25 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ವಿತರಿಸಿದ್ದಾರೆ ಎಂಬ ಆರೋಪ ಇದೀಗ ಗಂಭೀರ ಕಾನೂನು ಸಮಸ್ಯೆಯಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ಮುಖಂಡ ತೇಜಸ್ ಗೌಡ ಅವರು ಆದಾಯ ತೆರಿಗೆ ಇಲಾಖೆಯ ಬೆಂಗಳೂರು ಹಾಗೂ ಗೋವಾ ವಲಯದ ಡೈರೆಕ್ಟರ್ ಜನರಲ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ದೂರುದಲ್ಲಿ, ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಸೆಕ್ಷನ್ (Section) 269ST ಅಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಹಣದ ಮೂಲ ಏನು? ಅದು ಯಾವ ಖಾತೆಯಿಂದ ಬಂದಿದೆ? ನಗದು ರೂಪದಲ್ಲೇ ನೀಡಲು ಕಾರಣವೇನು? ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸಚಿವರಿಗೆ ನೋಟಿಸ್ ನೀಡಬೇಕೆಂದು ದೂರುದಾರರು ಮನವಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸುತ್ತದೆಯೇ? ಸಚಿವರಿಂದ ಸ್ಪಷ್ಟನೆ ಕೇಳಲಾಗುತ್ತದೆಯೇ? ಎಂಬುದು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ನಗದು ವ್ಯವಹಾರಗಳ ಅಪಾಯ ಮತ್ತು ಕಾನೂನು ಪರಿಣಾಮಗಳನ್ನು ಕುರಿತು ಸುಪ್ರೀಂಕೋರ್ಟ್ ಕೂಡ ಹಲವಾರು ಬಾರಿ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ನಡೆದ ಒಂದು ಪ್ರಕರಣದಲ್ಲಿ, ಶಿಕ್ಷಣ ಸಂಸ್ಥೆಯೊಂದು ಜಾಗ ಖರೀದಿಗಾಗಿ 75 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದ್ದರೂ, ನಂತರ ಜಮೀನು ಮಾಲೀಕರು ಒಪ್ಪಂದವನ್ನು ನಿರಾಕರಿಸಿದಾಗ, ನ್ಯಾಯಾಲಯ ನಗದು ವ್ಯವಹಾರಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.
2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ನೀಡುವುದು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಇದೇ ಹಿನ್ನೆಲೆಯಲ್ಲಿ, ನಗದು ವ್ಯವಹಾರಗಳಿಂದ ದೂರವಿರಬೇಕು ಎಂಬ ಜಾಗೃತಿ ಮೂಡಿಸಲು ಆರ್‌ಬಿಐ ಹಾಗೂ ಆದಾಯ ತೆರಿಗೆ ಇಲಾಖೆಗೆ ನ್ಯಾಯಾಲಯ ಸೂಚನೆ ನೀಡಿದೆ.
ಇಂತಹ ಹಿನ್ನೆಲೆಯಲ್ಲೇ ಇದೀಗ ಸಚಿವರ ವಿರುದ್ಧದ ದೂರು ಮಹತ್ವ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದನ್ನು ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯ ಕಾದು ನೋಡುತ್ತಿದೆ.