ಬೆಂಗಳೂರು, ಮಾ. 31: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸುವಂತೆ ಆಗ್ರಹಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಿ ಎಂದು ಹೇಳಲು ಕಾಂಗ್ರೆಸ್ಗೆ ನೈತಿಕತೆ ಇಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮೇಟಿ ಕೇಸ್ ನಲ್ಲಿ ಏನು ಮಾಡಿತು ಎಂಬುದು ಗೊತ್ತಿದೆ. ಹೆಚ್.ವೈ. ಮೇಟಿ ಪ್ರಕರಣದಲ್ಲಿ ಕಾಂಗ್ರೆಸ್ ಎಫ್ ಐಆರ್ ಸಹ ಹಾಕಿರಲಿಲ್ಲ. ವಿಡಿಯೋ ಮಾಡಿದ್ದು ಯಾರು ಅಂತಾ ಸಹ ಕಂಡು ಹಿಡಿದಿರಲಿಲ್ಲ. ತನಿಖೆ ನಡೆಸದೇ ಕ್ಲೀನ್ ಚಿಟ್ ನೀಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ಗೆ ರಮೇಶ್ ಜಾರಕಿಹೊಳಿಯನ್ನು ಬಂಧಿಸುವಂತೆ ಹೇಳಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೇ, ತನಿಖೆಯಲ್ಲಿ ನಾನು ಮಧ್ಯ ಪ್ರವೇಶಿಸಲ್ಲ. ಎಸ್ ಐಟಿ ಕಾನೂನು ಬದ್ಧವಾಗಿ ತನಿಖೆ ನಡೆಸುತ್ತಿದೆ. ರಮೇಶ್ ಜಾರಕಿಹೊಳಿ ಬಂಧನದ ಬಗ್ಗೆ ಎಸ್ ಐಟಿ ನಿರ್ಧಾರ ಮಾಡುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.