ಹೊಸದಿಲ್ಲಿ, ನ. 25: ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್(71) ಅವರು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
ಕಳೆದ ಕೆಲವು ವಾರಗಳ ಹಿಂದಷ್ಟೇ ಅಹ್ಮದ್ ಪಟೇಲ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಗುರುಗ್ರಾಮ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಮೆಡಂತಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರ ಮಗ ಫೈಸಲ್ ಪಟೇಲ್, `ಈ ವಿಷಯವನ್ನು ತಿಳಿಸಲು ಬಹಳ ದುಃಖವಾಗುತ್ತಿದೆ. ನನ್ನ ತಂದೆ ಶ್ರೀ ಅಹ್ಮದ್ ಪಟೇಲ್ ಅವರು 25/11/2020ರಂದು ಮುಂಜಾನೆ 3.30ಕ್ಕೆ ನಿಧನರಾದರೆಂದು ಘೋಷಿಸಲು ವಿಷಾದಿಸುತ್ತೇನೆ’ ಎಂದು ಹೇಳಿದ್ದಾರೆ.
71 ವರ್ಷದ ಅಹ್ಮದ್ ಪಟೇಲ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಖಜಾಂಚಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತ ಸಲಹೆಗಾರರಾಗಿದ್ದರು. ಅಹ್ಮದ್ ಪಟೇಲ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
@ahmedpatel pic.twitter.com/7bboZbQ2A6
— Faisal Ahmed Patel (@mfaisalpatel) November 24, 2020