ಮೈಸೂರು, ಫೆ. 24: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ದೋಸ್ತಿ ಮೇಲುಗೈ ಸಾಧಿಸಿದೆ. ದಳಪತಿಗಳ ಮೈತ್ರಿ ಆಟಕ್ಕೆ ಮೇಯರ್ ಗದ್ದುಗೆ ಏರುವ ಬಿಜೆಪಿ ಕನಸು ನುಚ್ಚುನೂರಾಗಿದೆ.
ಮೈಸೂರು ಮಹಾನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಕೈ ಹಾಗೂ ತೆನೆ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ 43 ಮತಗಳನ್ನು ಪಡೆದರೆ, ಇವರಿಗೆ ಎದುರಾಳಿಯಾಗಿ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ 26 ಮತಗಳನ್ನು ಪಡೆದರು. ಅಂತೆಯೇ ಉಪ ಮೇಯರ್ ಸ್ಥಾನಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಸದಸ್ಯ ಅನ್ವರ್ ಬೇಗ್ 43 ಮತಗಳಿಂದ ಗೆಲುವು ಸಾಧಿಸಿದರೆ. ಬಿಜೆಪಿಯ ಸಾತ್ವಿಕ್ ಕೇವಲ 26 ಮತಗಳನ್ನು ಮಾತ್ರ ಪಡೆದರು.
ಆ ಮೂಲಕ ಮೈಸೂರು ಮಹಾನಗರ ಪಾಲಿಕೆಯ 23ನೇ ಅವಧಿಯ 34ನೇ ಮೇಯರ್ ಆಗಿ ರುಕ್ಮಿಣಿ ಮಾದೇಗೌಡ (ಜೆಡಿಎಸ್, ವಾರ್ಡ್ ನಂ.36) ಅಧಿಕಾರದ ಚುಕ್ಕಾಣಿ ಹಿಡಿದರು. ಈ ಮೂಲಕ ಪಾಲಿಕೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಒಪ್ಪಂದ ಮುಂದುವರಿದಿದೆ.

ಈ ನಡುವೆ ಪಾಲಿಕೆಯಲ್ಲಿ ಅತಿದೊಡ್ಡ ಪಕ್ಷ ಎನಿಸಿದ್ದ ಬಿಜೆಪಿ, ಮೊದಲ ಬಾರಿಗೆ ಪಾಲಿಕೆ ಮೇಯರ್ ಕುರ್ಚಿ ಏರುವ ಕನಸು ನುಚ್ಚುನೂರಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ತಂತ್ರಕ್ಕೆ ಶರಣಾದ ಬಿಜೆಪಿ, ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಭಗ್ನಗೊಂಡಿದೆ.