Bengaluru: ಚುನಾವಣೆಗೂ ಮುನ್ನ ಕೆಲವು ದಿನಗಳ ಹಿಂದೆ ಕಾಂಗ್ರೆಸ್ನಲ್ಲಿ (Congress) ಸ್ಫೋಟಗೊಂಡಿದ್ದ ಅನುದಾನ ಅಸಮಾಧಾನದ ಬಾಂಬ್, ಇದೀಗ ಮತ್ತೆ ಎಲ್ಲೆಡೆ ಸದ್ದು ಮಾಡುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಅನುದಾನದ ವಿಚಾರವಾಗಿ ಸ್ಥಳೀಯ ಕಾಂಗ್ರೆಸ್ (Congress) ಮುಖಂಡರೇ ಶಾಸಕರ (MLA) ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ ಶಾಸಕ (MLA) ಹೆಚ್ಆರ್ ಗವಿಯಪ್ಪ ಹೊಸಪೇಟೆ ಪಾಲಿಗೆ ಶಾಪವಾಗಿದ್ದಾರೆ ಎಂದು ಹುಡಾ (Huda) ಅಧ್ಯಕ್ಷ ಇಮಾಮ್ ನಿಯಾಜಿ ಕಿಡಿಕಾರಿದ್ದಾರೆ.
ಇನ್ನು ವಿಜಯನಗರ ಕ್ಷೇತ್ರಕ್ಕೆ (Vijayanagar Constituency) ಅಂದಾಜು 150 ಕೋಟಿ ರೂಪಾಯಿ ಅನುದಾನ ಬಂದರೂ ಶಾಸಕ ಗವಿಯಪ್ಪ ಅವರು ಅನುದಾನವೇ ಬಂದಿಲ್ಲ ಎಂದು ಸುಳ್ಳು ಹೇಳುತ್ತಾರೆ. ಜನರ ಕಣ್ ಕಟ್ಟಿ ಮೋಸ ಮಾಡುತ್ತಿದ್ದಾರೆ.ಜನರು ಅನುದಾನಗಳಿಂದ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣಬಹುದು ಎಂಬ ನಂಬಿಕೆಯಲ್ಲಿದ್ದಾರೆ ಎಂದು ಇಮಾಮ್ ನಿಯಾಜಿ ಅಸಮಾಧಾನ ಹೊರಹಾಕಿದ್ದಾರೆ. ಎರಡು ದಿನಗಳ ಹಿಂದಷ್ಟೇ, ನಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ (Govt) ಯಾವುದೇ ಅನುದಾನ ಬರುತ್ತಿಲ್ಲ ಎಂದು ಶಾಸಕ (MLA) ಗವಿಯಪ್ಪ ಹೇಳಿದ್ದರು. ಹಾಗಾಗಿ ಆ ಹೇಳಿಕೆ ಸುಳ್ಳೆಂದು ಹುಡಾ ಅಧ್ಯಕ್ಷ (HUDA Chairman) ಇಮಾಮ್ ನಿಯಾಜಿ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ, ಕೊಪ್ಪಳ ಜಿಲ್ಲೆಯ ಬಿಜೆಪಿ (BJP) ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಕೊಪ್ಪಳ ಜಿಲ್ಲೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ (Kalyan Karnataka Development Board) 140 ಕೋಟಿ ರೂಪಾಯಿ ಅನುದಾನ ಬಂದಿದೆ. ಆದರೆ, ಗಂಗಾವತಿ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ ಅನುದಾನ ಹಂಚಿಕೆ ತಾರತಮ್ಯ ಆರೋಪ ಮತ್ತೆ ಸದ್ದು ಮಾಡುತ್ತಿದೆ. ಸ್ವತಃ ಕಾಂಗ್ರೆಸ್ (Congress) ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಬಿಜೆಪಿ (BJP) ಶಾಸಕರೂ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.