ಕಾಂಗ್ರೆಸ್‌ ಹೋರಾಟ ಪೆಟ್ರೋಲ್‌ ಬೆಲೆ ಇಳಿಸಲೋ ಅಥವಾ ಜಿಎಸ್‌ಟಿಗೆ ಸೇರಿಸಲೋ: ಎಚ್‌ಡಿಕೆ ಪ್ರಶ್ನೆ

ಬೆಂಗಳೂರು, ಜೂ. 14: ಕಾಂಗ್ರೆಸ್‌ ದೇಶಾದ್ಯಂತ ಹೋರಾಡುತ್ತಿರುವುದು ಪೆಟ್ರೋಲ್‌ ಬೆಲೆ ಇಳಿಸಲೋ ಅಥವಾ ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸಲೋ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಅವರು, ʻಕೇಂದ್ರ ಸರ್ಕಾರ ಪೆಟ್ರೋಲ್‌ ಬೆಲೆ ಏರಿಸುತ್ತಿದೆ. ಇತ್ತ ಕಾಂಗ್ರೆಸ್‌ ದೇಶದಾದ್ಯಂತ ಹೋರಾಡುತ್ತಿದೆ. ಪೆಟ್ರೋಲ್‌ ಬೆಲೆ ಇಳಿಯಬೇಕಿದ್ದರೆ ಅದನ್ನು ಜಿಎಸ್‌ಟಿಗೆ ಸೇರಿಸಬೇಕೆಂದು ಕೇಂದ್ರ ಹೇಳಿದರೆ, ಕಾಂಗ್ರೆಸ್‌ ಕೂಡ ಅದನ್ನೇ ಪ್ರತಿಪಾದಿಸಿದೆ. ಹಾಗಾದರೆ, ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸಲೋ ಎಂದು ಕೇಳಿದ್ದಾರೆ.

ಪೆಟ್ರೋಲಿಯಂ ಖಾತೆಯ ಮಾಜಿ ಸಚಿವರೂ, ಕಾಂಗ್ರೆಸ್‌ನ ಹಿರಿಯರೂ ಆಗಿರುವ ನಾಯಕರೊಬ್ಬರು ಪೆಟ್ರೋಲನ್ನು ಜಿಎಸ್‌ಟಿಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಪೆಟ್ರೋಲ್‌ ಮೇಲಿನ ಮಿತಿ ಇಲ್ಲದ ತೆರಿಗೆ ಇಳಿಸುವುದು ಕಾಂಗ್ರೆಸ್‌ ಉದ್ದೇಶವಲ್ಲ, ಅದನ್ನು ಜಿಎಸ್‌ಟಿಗೆ ಸೇರಿಸುವುದಷ್ಟೇ ಅದರ ಉದ್ದೇಶ ಎಂಬುದು ಸಾಬೀತಾಗಿದೆ. ಆದರೆ, ಅದರ ಅಪಾಯ ಕಾಂಗ್ರೆಸ್‌ಗೆ ಗೊತ್ತಿಲ್ಲ ಎಂದು ಎಂದು ಹೇಳಿದ್ದಾರೆ.
ಕೇಂದ್ರದ ಅಧಿಕಾರದ ಮೇಲೆ ಕಣ್ಣಿಟ್ಟು ಅದರ ಸುತ್ತಲೇ ರಾಜಕಾರಣ ಮಾಡುವುದಷ್ಟೇ ರಾಷ್ಟ್ರೀಯ ಪಕ್ಷಗಳ ಅಜೆಂಡಾ. ಅವುಗಳಿಗೆ ರಾಜ್ಯಗಳ ಹಿತಾಸಕ್ತಿ, ಸ್ಥಳೀಯ ಅಗತ್ಯಗಳು ಲೆಕ್ಕಕ್ಕೇ ಇಲ್ಲ. ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸುವುದು ರಾಜ್ಯಗಳನ್ನು ಶೋಷಿಸಿದಂತೆ. ಈಗ ಕಾಂಗ್ರೆಸ್‌–ಬಿಜೆಪಿಗಳೆರಡೂ ಆ ಶೋಷಣೆ ಪರವಾಗಿ ನಿಂತಿವೆ ಎಂಬುದು ಬಹಿರಂಗವಾಗಿದೆ ಎಂದು ಟೀಕಿಸಿದ್ದಾರೆ.

ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ತಂದರೆ ಜನರಿಗೆ ತಕ್ಷಣಕ್ಕೆ ಬೆಲೆ ಇಳಿದಂತೆ ಅನ್ನಿಸಬಹುದು. ಆದರೆ, ಪೆಟ್ರೋಲನ್ನು ಜಿಎಸ್‌ಟಿಗೆ ಸೇರಿಸುತ್ತಲೇ ಅದರ ಮೇಲಿನ ತೆರಿಗೆಯಿಂದ ಬರುತ್ತಿದ್ದ ಸಂಪನ್ಮೂಲ ರಾಜ್ಯಗಳ ಕೈತಪ್ಪಿ ಹೋಗುತ್ತದೆ. ಎಲ್ಲ ತೆರಿಗೆಯೂ ಕೇಂದ್ರದ ಪಾಲಾಗಿ ರಾಜ್ಯಗಳು ಸಂಪನ್ಮೂಲ ಬರ ಎದುರಿಸುತ್ತವೆ. ರಾಜ್ಯಗಳ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ. ತೈಲ ಬೆಲೆ ಇಳಿಸುವ ಉದ್ದೇಶದೊಂದಿಗೆ ಪೆಟ್ರೋಲನ್ನು ಜಿಎಸ್‌ಟಿಗೆ ಸೇರಿಸುವುದು ಪರಿಹಾರವಲ್ಲ. ಅದು ಶೋಷಣೆ. ಬದಲಿಗೆ ಕೇಂದ್ರ ಈಗ ವಿಧಿಸುತ್ತಿರುವ ಮಿತಿಮೀರಿದ ಸುಂಕ ಕಡಿತ ಮಾಡಲಿ. ರಾಜ್ಯ ಸರ್ಕಾರವೂ ತೆರಿಗೆ ಇಳಿಸಲಿ. ಈಗ ತೈಲದ ಮೇಲೆ ಕೇಂದ್ರ, ರಾಜ್ಯಗಳೆರಡೂ ಶೇ. 68ರಷ್ಟು ತೆರಿಗೆ ವಿಧಿಸುತ್ತಿವೆ. ಈ ತೆರಿಗೆ ಪ್ರಮಾಣ ಕಡಿಮೆಯಾಗಬೇಕಾದ್ದು ಅಗತ್ಯ ಎಂದು ತಿಳಿಸಿದ್ದಾರೆ.

ಅಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈಗ ಒಂದು ಲೀಟರ್‌ ಪೆಟ್ರೋಲ್‌ ಮೇಲೆ ₹60–65 ತೆರಿಗೆ ಹಣ ಸಿಗುತ್ತಿದೆ. ಆದರೆ, ಎರಡೂ ಸರ್ಕಾರಗಳೂ ಲೀಟರ್‌ ಪೆಟ್ರೋಲ್‌ ಮೇಲೆ ಸಂಗ್ರಹಿಸುವ ಹಣ ₹30 ಮೀರಬಾರದು. ಆಗ ಪೆಟ್ರೋಲ್‌ ₹65–70ಗೆ ಬಂದು ನಿಲ್ಲಲಿದೆ. ನಿಜವಾಗಿಯೂ ಆಗಬೇಕಾದ್ದು ಇದು. ಈ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಡಬೇಕಿದೆ. ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧದ ಹೋರಾಟಗಳು ತೆರಿಗೆ, ಸುಂಕ ಇಳಿಕೆಯ ಉದ್ದೇಶದ್ದಾಗಿರಬೇಕೇ ವಿನಾ GSTಗೆ ಸೇರಿಸುವುದಾಗಿರಬಾರದು. ಈಗ ಕಾಂಗ್ರೆಸ್‌ ಪ್ರತಿಭಟಿಸುತ್ತಿರುವುದು ತೆರಿಗೆ ಇಳಿಸಲೋ ಅಥವಾ ಪೆಟ್ರೋಲನ್ನು ಜಿಎಸ್‌ಟಿಗೆ ಸೇರಿಸಲೋ ಎಂಬುದು ಸ್ಪಷ್ಟವಾಗಬೇಕು. ಜಿಎಸ್‌ಟಿಗೆ ಸೇರಿಸುವುದೇ ಕಾಂಗ್ರೆಸ್‌ ಉದ್ದೇಶವಾಗಿದ್ದರೆ ಅದು ಶೋಷಣೆ ಪರವಾದ ಹೋರಾಟ. ಪೆಟ್ರೋಲ್‌ ಮೇಲೆ ಕೇಂದ್ರ, ರಾಜ್ಯ ಸರ್ಕಾರಗಳೆರಡು ವಿಧಿಸುತ್ತಿರುವ ಅತ್ಯಧಿಕ ತೆರಿಗೆ ಇಳಿಸುವ ಮೂಲಕ ಬೆಲೆ ಏರಿಕೆ ತಗ್ಗಿಸಬೇಕು ಎಂಬುದು ಜೆಡಿಎಸ್‌ ಒತ್ತಾಯ. ಜತೆಗೆ ಪೆಟ್ರೋಲನ್ನು ಜಿಎಸ್‌ಟಿಗೆ ಸೇರಿಸುವ ರಾಷ್ಟ್ರೀಯ ಪಕ್ಷಗಳ ಹುನ್ನಾರದ ವಿರುದ್ಧ ಹೋರಾಡುವುದೂ ನಮ್ಮ ನಿಲುವು. ಇದರ ಸುತ್ತಲೇ ನಾವು ಹೋರಾಟ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

Latest News

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.