ಬೆಳಗಾವಿ ಡಿ 21 : ಸಾಕಷ್ಟು ಜನರು ನಿರೀಕ್ಷೆ ಮಾಡಿದ್ದ ಮತಾಂತರ ನಿಷೇಧ ಕಾಯ್ದೆ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಮಂಡನೆಯಾಗಲಿದೆ. ರಾಜ್ಯ ಸರಕಾರ ಮತಾಂತರ ನಿಷೇಧ ವಿಧೇಯಕ ಮಂಡನೆಯನ್ನು ಇಂದು ಮಾಡುತ್ತಿದ್ದು, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಪ್ಪಿಗೆ ನೀಡಲಾಗಿದೆ. ಅಂದ ಹಾಗೇ ರಾಜ್ಯ ಸರ್ಕಾರ ಇಂದು ಮಂಡನೆ ಮಾಡಲು ಮುಂದಾಗಿರುವ ಈ ಮಸೂದೆಯಲ್ಲಿ ವಿಧೇಯಕದಲ್ಲಿ ಬಲವಂತದ ಮತಾಂತರಕ್ಕೆ ಹತ್ತು ವರ್ಷದ ವರೆಗೂ ಶಿಕ್ಷೆ ಕೊಡುವ ಅವಕಾಶವಿದ್ದು, ಈ ಮೂಲಕ ಹಣದ ಆಸೆಯ ಸಲುವಾಗಿ ಜನತೆ ಬೇರೆ ಧರ್ಮಕ್ಕೆ ಹೋಗುತ್ತಾರೆ ಎನ್ನುವ ಗಂಭೀರ ಆರೋಪಕ್ಕೆ ತಕ್ಕ ಶಿಕ್ಷೆ ಆಗಲಿದೆ.
ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ರ ಪ್ರಕಾರ ಬಲವಂತದ ಮತಾಂತರ ಜಾಮೀನುರಹಿತ ಅಪರಾಧವಾಗಲಿದ್ದು, ಈ ಮೂಲಕ ಮತಾಂತರ ಅಸಿಂಧುವಾಗಲಿದೆ. ಇದಲ್ಲದೇ, ಮತಾಂತರ ಆಗುವವರಿಗೆ ಉಡುಗೊರೆ, ಕೆಲಸ, ಉಚಿತ ಶಿಕ್ಷಣ, ವಿವಾಹದ ಆಮಿಷ ಒಡ್ಡುವುದು, ಭಾವನಾತ್ಮಕವಾಗಿ ತಮ್ಮತ್ತ ಸೆಳೆದು ಮತಾಂತರ ಗೊಳಿಸಿವುದು ಕೂಡ ಅಪರಾಧವಾಗಿದೆ. ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿಗಳಿಗೂ ಮತಾಂತರದ ಬಗ್ಗೆ ದೂರನ್ನು ನೀಡಿದರೆ ಎಫ್ ಐಆರ್ ದಾಖಲಿಸುವ ಅವಕಾಶವಿದೆ. ಸಾಮೂಹಿಕ ಮತಾಂತರದಲ್ಲಿ ಶಿಕ್ಷಣ ಸಂಸ್ಥೆ, ಆಶ್ರಮ, ಧಾರ್ಮಿಕ ಮಿಷನರಿ, ಎನ್‍ಜಿಓ ಪಾಲ್ಗೊಳ್ಳುವಂತಿಲ್ಲ. ಸಾಮೂಹಿಕ ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸಲಾಗುವುದು. ಮತಾಂತರವಾಗಲು ಮುಂದಾಗಿರುವ ವ್ಯಕ್ತಿ ಕನಿಷ್ಠ ಆರವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಬೇಕಾಗಿದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ30 ದಿನಗಳ ಒಳಗಾಗಿ ಆಕ್ಷೇಪನೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಲು ಅವಕಾಶ ವನ್ನು ಈ ಕಾಯ್ದೆಯಲ್ಲಿ ಇದೆ.