ನವದೆಹಲಿ, ಮೇ. 12: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,48,421 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, 4,205 ಮಂದಿ ಮೃತಪಟ್ಟಿದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಮೂಲಕ ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,33,40,938 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 2,54,197 ಆಗಿದೆ. ಅಂದಹಾಗೇ ಇಲ್ಲಿಯವರೆಗೆ ಅತೀ ಹೆಚ್ಚು ಕೊವಿಡ್ ರೋಗಿಗಳು ಮೃತಪಟ್ಟ ದಿನವಾಗಿದೆ ಮೇ 11. ಕಳೆದ 24ಗಂಟೆಗಳಲ್ಲಿ 3,55,338 ರೋಗಿಗಳು ಚೇತರಿಸಿಕೊಂಡಿದ್ದು, ಒಟ್ಟು 37,04,099 ಸಕ್ರಿಯ ಪ್ರಕರಣಗಳಿವೆ.
ಸತತ ಎರಡನೇ ದಿನವೂ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ ಕಂಡಿದೆ. ಮಾರ್ಚ್ 9 ರ ನಂತರ ಈ ರೀತಿ ಇಳಿಕೆ ಕಂಡಿರುವುದು ಇದೇ ಮೊದಲು. ದೇಶದ 700 ಜಿಲ್ಲೆಗಳ ಪೈಕಿ 533 ರಷ್ಟು ಜಿಲ್ಲೆಗಳಲ್ಲಿ ಈಗ ಶೇಕಡಾ 10 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ಗ್ರಾಮೀಣ ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ವ್ಯಾಪಕ ಹರಡುವಿಕೆಯೂ ಇದೆ. ಒಟ್ಟು 13 ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ; ಆರು ರಾಜ್ಯಗಳಲ್ಲಿ 50,000 ರಿಂದ 1 ಲಕ್ಷ ಸಕ್ರಿಯ ಪ್ರಕರಣಗಳಿವೆ; ಮತ್ತು 17 ರಾಜ್ಯಗಳಲ್ಲಿ 50,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.