ಬೆಂಗಳೂರು, ಮೇ. 12: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆಯನ್ನು ಅಪೆಕ್ಸ್ ಬ್ಯಾಂಕ್ ನೀಡಿದ್ದು, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಬುಧವಾರ ಮುಖ್ಯಮಂತ್ರಿಗಳಿಗೆ ಚೆಕ್ಕನ್ನು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಕೋವಿಡ್ ಎರಡನೆಯ ಬಹಳ ಗಂಭೀರವಾಗಿ ಪರಿಣಾಮವನ್ನು ಬೀರುತ್ತದೆ. ಇದರ ನಿರ್ವಹಣೆ ಸರ್ಕಾರಗಳಿಗೂ ಒಂದು ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳು ಸರ್ಕಾರದ ನೆರವಿಗೆ ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಪೆಕ್ಸ್ ಬ್ಯಾಂಕ್ ಮೂಲಕ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದಂತೆ ಇತರ ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳು ಮುಂದಾಗಬೇಕಿದೆ.
ಆ ಮೂಲಕ ಸಾರ್ವಜನಿಕ ಹಿತಾಸಕ್ತಿಗೆ ಇಂತಹ ಹಣ ಬಳಕೆಯಾಗಲು ಕಾರಣವಾಗಬೇಕಿದೆ. ನಾನು ಸಹ ಮೈಸೂರು ಮೃಗಾಲಯ ನಿರ್ವಹಣೆಗೆ ದಾನಿಗಳು ನೆರವು ನೀಡಬೇಕೆಂದು ನಿನ್ನೆಯಷ್ಟೇ ಮೈಸೂರಿನಲ್ಲಿ ಮನವಿ ಮಾಡಿದ್ದೆ. ಹೀಗೆ ಉದಾರಿಗಳ ನೆರವಿನಿಂದ ಇಂತಹ ಮಹಾಮಾರಿ ಎದುರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ 1 ಲಕ್ಷ N-95 ಮಾಸ್ಕ್ ಅನ್ನು ಸಹ ಮುಖ್ಯಮಂತ್ರಿಗಳಿಗೆ ಅಪೆಕ್ಸ್ ಬ್ಯಾಂಕ್ ವತಿಯಿಂದ ನೀಡಲಾಯಿತು. ಇದೇ ವೇಳೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕರಾದ ಬೆಳ್ಳಿಪ್ರಕಾಶ್, ಮಾರ್ಕೆಟಿಂಗ್ ಫೆಡರೇಶನ್ ಅಧ್ಯಕ್ಷ ರಾಜೇಂದ್ರ ಕುಮಾರ್, ಅಪೆಕ್ಸ್ ಬ್ಯಾಂಕ್ ಎಂಡಿ ಸಿ.ಎನ್.ದೇವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.