ನವದೆಹಲಿ, ಮೇ. 20: ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ಸ್ವಲ್ಪ ತಗ್ಗಿದ್ದರೂ, ಕೊರೋನಾಗೆ ಬಲಿಯಾದವರ ಸಂಖ್ಯೆ ಬುಧವಾರ ಹೊಸ ವಿಶ್ವ ದಾಖಲೆ ಬರೆದಿದೆ. ಒಂದೇ ದಿನ 4,529 ಮಂದಿ ವೈರಸ್ ಸೋಂಕಿನಿಂದ ಸಾವಿಗೀಡಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ 2021ರ ಏ.12ರಂದು ಒಂದೇ ದಿನ 4468 ಜನರು ಸಾವನ್ನಪ್ಪಿದ್ದು ಈವರೆಗಿನ ದೈನಂದಿನ ಗರಿಷ್ಠ ದಾಖಲೆಯಾಗಿತ್ತು. ಅದನ್ನು ಇದೀಗ ಭಾರತ ಮುರಿದಿದೆ.
ದಿನವೊಂದಕ್ಕೆ 4 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಪತ್ತೆಯಾಗುತ್ತಿದ್ದ ಸೋಂಕು ಮಂಗಳವಾರ 2.62 ಲಕ್ಷಕ್ಕೆ ಕುಸಿದಿತ್ತು. ಬುಧವಾರ 2,67,334 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಆದರೆ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆ 4529ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ಗೆ ಈವರೆಗೂ ಬಲಿಯಾದವರ ಸಂಖ್ಯೆ 2,83,248ಕ್ಕೆ ಏರಿಕೆಯಾಗಿದ್ದರೆ, ಒಟ್ಟು ಕೊರೋನಾ ಪೀಡಿತರ ಸಂಖ್ಯೆ 2,54,96,330ಕ್ಕೆ ಹೆಚ್ಚಳವಾಗಿದೆ. ಚೇತರಿಕೆ ಪ್ರಮಾಣ ಶೇ.86.23ರಷ್ಟಿದೆ.
ಸಾವಿನಲ್ಲಿ ಕರ್ನಾಟಕ ನಂ.2:
4529 ಹೊಸ ಸಾವುಗಳ ಪೈಕಿ ಮಹಾರಾಷ್ಟ್ರದಲ್ಲೇ ದಾಖಲೆಯ 1291 ಸಾವುಗಳು ವರದಿಯಾಗಿವೆ. ಕರ್ನಾಟಕದಲ್ಲಿ 525, ತಮಿಳುನಾಡಿನಲ್ಲಿ 364, ದೆಹಲಿಯಲ್ಲಿ 265, ಉತ್ತರಪ್ರದೇಶ 255, ಪಂಜಾಬ್ನಲ್ಲಿ 231 ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ 2,83,248 ಮಂದಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ.
ಟಾಪ್ 5 ರಾಜ್ಯಗಳು:
- ಮಹಾರಾಷ್ಟ್ರ 83,777 ಸಾವು
2. ಕರ್ನಾಟಕ 22,838 ಸಾವು
3. ದೆಹಲಿ 22,111 ಸಾವು
4. ತಮಿಳುನಾಡು 18,369 ಸಾವು
5. ಉತ್ತರ ಪ್ರದೇಶ 18,072 ಸಾವು