ಬೆಂಗಳೂರು,ಜೂ.23: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸಚಿವ ಎಸ್. ಸುರೇಶ್ ಕುಮಾರ್, ಕೊರೊನಾ ಸೋಂಕು ಇಳಿಮುಖ ಆಗುತ್ತಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ 3ನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ಕುರಿತು ಪ್ರಾಮಾಣಿತ ಕಾರ್ಯಾಚರಣೆ ವಿಧಾನ- ಎಸ್‌ಒಪಿ ಬಿಡುಗಡೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪರೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿದ ಎಸ್‌ಒಪಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿದೆ. ಈ ಮಾರ್ಗಸೂಚಿ ಆಧಾರದ ಮೇಲೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಶಿಕ್ಷಕರು, ಸಿಬ್ಬಂದಿ ಪರೀಕ್ಷಾ ವೇಳೆಯೊಳಗೆ ಒಂದು ಡೋಸ್ ಲಸಿಕೆಯನ್ನಾದರೂ ಪಡೆಯಬೇಕು. ಪರೀಕ್ಷೆಗೆ ನಡೆಯುತ್ತಿರುವ ಸಿದ್ಧತೆಯನ್ನು ಮುಂಚಿತವಾಗಿ ಜಿಲ್ಲಾಧಿಕಾರಿ, ಸಿಇಒ, ಎಸ್‌ಪಿ ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪರೀಕ್ಷೆ ಆರಂಭಕ್ಕೂ ಮೊದಲು ಮತ್ತು ಪರೀಕ್ಷೆಯ ಬಳಿಕ ಸೋಂಕು ನಿವಾರಕ ದ್ರಾವಣದಿಂದ ಸ್ಥಳೀಯಾಡಳಿತ ಸಂಸ್ಥೆಗಳ ನೆರವಿನಿಂದ ಪರೀಕ್ಷಾ ಕೇಂದ್ರ, ಪರೀಕ್ಷಾ ಕೊಠಡಿ, ಪೀಠೋಪಕರಣ ಮತ್ತು ಶೌಚಾಲಯಗಳನ್ನು ಸ್ಯಾನಿಟೈಜೇಷನ್ ಮಾಡುವುದು, ಪರೀಕ್ಷಾ ಕೇಂದ್ರಕ್ಕೆ ಬರುವ ಮತ್ತು ನಿರ್ಗಮನ, ಕೊಠಡಿ ಪ್ರವೇಶ ಸಮಯದಲ್ಲಿ ಅಂತರ ಕಾಪಾಡಿಕೊಳ್ಳುವುದು. ಪರೀಕ್ಷಾ ಕೇಂದ್ರದ ಪ್ರವೇಶದ ಸಂದರ್ಭದಲ್ಲಿ ಮಕ್ಕಳ ಕೈಗೆ ಸ್ಯಾನಿಟೈಜ್ ಮಾಡುವುದು.
ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳಿರಬೇಕು, ಒಂದು ಡೆಸ್ಕ್‌ಗೆ ಒಬ್ಬ ಪರೀಕ್ಷಾರ್ಥಿ ಮಾತ್ರವೇ ಇರಬೇಕು. ಮಕ್ಕಳು ಯಾವ ಸಮಯದಲ್ಲೂ ಗುಂಪು ಗೂಡುವುದನ್ನು ತಡೆಯುವುದು. ಮನೆಯಿಂದ ನೀರಿನ ಬಾಟಲಿ ಮತ್ತು ಊಟದ ಡಬ್ಬಿ ತರುವುದಕ್ಕೆ ಅವಕಾಶ ಕಲ್ಪಿಸುವುದು. ಪರೀಕ್ಷಾ ಕೊಠಡಿಯಲ್ಲಿ ಮಳೆ ನೀರು ಇರುಚಲು ಸಿಂಪಡಿಸದಂತೆ ಕ್ರಮ ವಹಿಸುವುದು. ಗ್ರಾಮೀಣ ವಿಭಾಗದ ಅಭ್ಯರ್ಥಿಗಳು ಸಾಧ್ಯವಾದಷ್ಟು ತಾಲ್ಲೂಕು ಕೇಂದ್ರಗಳಿಗೆ ಹೋಗದಂತೆ ಪರೀಕ್ಷಾ ಕೇಂದ್ರಗಳನ್ನು ರಚಿಸುವುದನ್ನು ಖಾತರಿಪಡಿಸಿಕೊಳ್ಳಬೇಕೆಂದು ಎಸ್‌ಒಪಿಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಕೆಮ್ಮು, ನೆಗಡಿ, ಜ್ವರ ಲಕ್ಷಣಗಳಿರುವ ಅಭ್ಯರ್ಥಿಗಳಿಗೆ ಕನಿಷ್ಠ ಎರಡು ವಿಶೇಷ ಕೊಠಡಿ ಕಾಯ್ದಿರಿಸಬೇಕು. ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರುವುದನ್ನು ಖಾತರಿಪಡಿಸಬೇಕು ಎಂದು ಸೂಚಿಸಲಾಗಿದೆ. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಆರೋಗ್ಯ ಕೌಂಟರ್‌ಗಳಲ್ಲೇ ಮಾಸ್ಕ್ ನೀಡಲಾಗುತ್ತದೆ’ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.