ಬೆಂಗಳೂರು, ಏ. 19: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ, ಬಳಿಕ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಕೊರೊನಾ ನಿಯಂತ್ರಣ ಸಂಬಂಧ ಚರ್ಚಿಸಲು ಸರ್ವಪಕ್ಷ ಸಭೆ ಕರೆಯಲಾಗಿದೆ. ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಟಫ್ ರೂಲ್ಸ್ ಜಾರಿ ಮಾಡಲಾಗುತ್ತದೆ ಎಂದರು.
ಅಲ್ಲದೇ ಲಾಕ್ ಡೌನ್ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಆದರೆ ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಪರಿಹಾರವಲ್ಲ. ಜನರ ಜೀವ ಕಾಪಾಡುವುದು ಸರ್ಕಾರದ ಮುಖ್ಯ ಉದ್ದೇಶ. ಜೀವ ಇದ್ದರೇ ಜೀವನ ನಡೆಸಬಹುದು. ಹೀಗಾಗಿ ಕರೋನಾ ಕಂಟ್ರೋಲ್ ಮಾಡಬೇಕಿದೆ. ಜಾಗೃತಿ ಮೂಡಿಸುವ ಸಲುವಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಸರ್ವಪಕ್ಷ ಸಭೆ ಬಳಿಕ ಟಫ್ ರೂಲ್ಸ್ ಜಾರಿ ಮಾಡಲಾಗುತ್ತದೆ ಎಂದರು.
ಇಂದು ಸಚಿವರಿಂದ ಸಭೆ
ಇನ್ನೂ, ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಕೋವಿಡ್-19 ಸಾಂಕ್ರಾಮಿಕ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ತಾವು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಿಂದ ಇಂದು ಮಧ್ಯಾಹ್ನ 3 ಗಂಟೆಗೆ, ಸಂಬಂಧಪಟ್ಟ ಸಚಿವರುಗಳು, ಬೆಂಗಳೂರು ಶಾಸಕರು ಹಾಗೂ ಸಂಸದರುಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ.