ಬೆಂಗಳೂರು: ಕೊರೊನಾ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ನಡುವಿನ ಆರೋಪ-ಪ್ರತ್ಯಾರೋಪದ ಸರಣಿ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ.
ಬೆಂಗಳೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಕೊರೊನಾದಿಂದ ಜನತೆ ತೀವ್ರ ಆತಂಕ ಮತ್ತು ಸಂಕಷ್ಟದಲ್ಲಿದ್ದು, ಜನತೆ ಬೀಬಿ ಬೀದಿಯಲ್ಲಿ ಹೆಣ ಹೊತ್ತು ತಿರುಗಾಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಬಿಜೆಪಿ ನಾಯಕರು ಬೆಂಕಿ ಬಿದ್ದಿರುವ ಮನೆಗಳಲ್ಲಿ ಗಳ ಇರಿಯುವ ಕೆಲಸ ಮಾಡುತ್ತಿದ್ದಾರೆ.
ಆರೋಗ್ಯ ಇಲಾಖೆಯಿಂದ ಪರಿಕರಗಳು ಸರಬರಾಜಾಗದೆ ಹಣ ಪಾವತಿಸಿರುವ ಮಾಹಿತಿ ತಮ್ಮ ಬಳಿ ಇದೆ. ಈ ಕುರಿತು ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಕೊರೊನಾಗಾಗಿ ಒಟ್ಟು 4000 ಕೋಟಿ ರೂ ಪಾವತಿಸಿದ್ದು, ಈ ಪೈಕಿ 2000 ಕೋಟಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕಿದೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು, ಕೊರೊನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಕೇವಲ 320 ಕೋಟಿ ಮಾತ್ರ ಖರ್ಚು ಮಾಡಲಾಗಿದೆ ಎಂಬ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಆರೋಪಿಸಿದರು.
ಶ್ರೀರಾಮುಲು ತಿರುಗೇಟು:
ಆದರೆ ಸಿದ್ದರಾಮಯ್ಯ ಅವರ ಆರೋಪಕ್ಕೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಆರೋಗ್ಯ ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಕೂಡ ಅವ್ಯವಹಾರ ಆಗಿಲ್ಲ. ಈ ಸಂಬಂಧ ಸಿದ್ದರಾಮಯ್ಯ ಕಳೆದ ಬಾರಿ ಆರೋಗ್ಯ ಇಲಾಖೆ ಮೇಲೆ ಎತ್ತಿದ್ದ ಆಕ್ಷೇಪಣೆಗಳಿಗೆ ಉತ್ತರ ನೀಡಿದ್ದೇನೆ. ಈಗ ಆರೋಗ್ಯ ಇಲಾಖೆ 750 ಕೋಟಿ ರೂ. ಖರ್ಚು ಮಾಡಿದೆ ಎಂಬ ಆರೋಪ ಮಾಡಿದ್ದಾರೆ. ಅಲ್ಲದೇ ಆರೋಗ್ಯ ಇಲಾಖೆ ಖರ್ಚು ಮಾಡಿದ್ದು 290 ಕೋಟಿ ರೂ. ಎಂದು ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಮತ್ತು ಮುಂದೆಯೂ ಹೇಳುತ್ತೇನೆ ಎಂದು ಸಿದ್ದು ಆರೋಪಕ್ಕೆ ತಿರುಗೇಟು ನೀಡಿದ್ದಾರೆ.