ದೆಹಲಿ, ಏ. 15: ದೇಶದಲ್ಲಿ ಕೊವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಇದು ಎರಡು ಲಕ್ಷ ದಾಟಿದೆ. ಬುಧವಾರ ದೇಶದಲ್ಲಿ ಪತ್ತೆಯಾದ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 2,00,739 ಆಗಿದ್ದು, 1,038 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಒಟ್ಟು ಸೋಂಕಿತರ ಸಂಖ್ಯೆ 1,40,74,564 (1.4 ಕೋಟಿಗೆ) ತಲುಪಿದ್ದು ಈವರೆಗೆ ಸಾವಿಗೀಡಾದವ ಸಂಖ್ಯೆ 1,73,123 ಆಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 14,71,877 ಆಗಿದ್ದು, 1,24,29,564 ಮಂದಿ ಚೇತರಿಸಿಕೊಂಡಿದ್ದಾರೆ. 11,44,93,238 ಮಂದಿ ಲಸಿಕೆ ಪಡೆದಿದ್ದಾರೆ.
ಜಗತ್ತಿನಲ್ಲಿ ಅತೀ ಹೆಚ್ಚು ಕೊವಿಡ್ ಸೋಂಕಿತರಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಏಪ್ರಿಲ್ 2ರ ನಂತರ ದೇಶದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು ಸೋಂಕು ನಿಯಂತ್ರಣಕ್ಕಾಗಿ ವಿವಿಧ ರಾಜ್ಯಗಳು ಕಠಿಣ ನಿರ್ಬಂಧ ಕೈಗೊಂಡಿವೆ.
ದೇಶದಾದ್ಯಂತ ಕೊವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವಾಗಲೇ ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಬುಧವಾರ 13.5 ಲಕ್ಷ ಭಕ್ತರು ಗಂಗಾ ನದಿ ಘಾಟ್ ನಲ್ಲಿ ಶಾಹಿ ಸ್ನಾನ ಮಾಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.