ನವದೆಹಲಿ, ಜು. 16: ಆಯಾ ರಾಜ್ಯಗಳ ಕೊರೊನಾ ಪರಿಸ್ಥಿತಿ, ಕೋವಿಡ್ ಲಸಿಕೆ ಹಂಚಿಕೆ ಹಾಗೂ ಕೊರೊನಾ ರೂಪಾಂತರಿ ವೈರಸ್ಗಳ ನಿಯಂತ್ರಣದ ಕುರಿತಂತೆ ಇಂದು ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಒಟ್ಟು ಆರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆದಿದ್ದು, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಒಡಿಶಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮೋದಿ ಸಭೆಯಲ್ಲಿ ಭಾಗಿಯಾಗಿದ್ದು, ತಮ್ಮ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈಗಲೇ ಪರಿಸ್ಥಿತಿ ನಿಭಾಯಿಸದಿದ್ದರೆ ಮುಂದೆ ಕಷ್ಟವಾಗುತ್ತದೆ. ಮಕ್ಕಳನ್ನು ಕೊವಿಡ್ನಿಂದ ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಿ. ಅನ್ಲಾಕ್ ಬಳಿಕದ ಪರಿಸ್ಥಿತಿ ಆತಂಕ ಮೂಡಿಸುತ್ತಿದೆ. ಅನ್ಲಾಕ್ ಬಳಿಕ ಬೇಜವಾಬ್ದಾರಿತನ ಹೆಚ್ಚುತ್ತಿದೆ. ಅಮೆರಿಕ, ಯುರೋಪ್, ಪಾಶ್ಚಿಮಾತ್ಯ ದೇಶಗಳಲ್ಲಿ ಕೊರೋನಾ ಮತ್ತೆ ಹೆಚ್ಚುತ್ತಿದೆ. ಆ ದೇಶಗಳಲ್ಲಿ ಕೊರೊನಾ ಪ್ರಕರಣ ವೇಗವಾಗಿ ಹರಡುತ್ತಿದೆ. ಕೊರೊನಾ ಸೋಂಕು ನಮ್ಮಿಂದ ದೂರ ಹೋಗಿಲ್ಲ. ಹೀಗಾಗಿ, ಇನ್ನೂ ಹೆಚ್ಚಿನ ಎಚ್ಚರ ಅಗತ್ಯ ಎಂದು 6 ರಾಜ್ಯಗಳ ಸಿಎಂಗಳ ಜತೆ ಸಭೆಯಲ್ಲಿ ಪ್ರಧಾನಿ ಸೂಚನೆ ನೀಡಿದ್ದಾರೆ.
ಕೋವಿಡ್ ಹೆಚ್ಚುತ್ತಿರುವ ಕಡೆ ತಕ್ಷಣ ಕ್ರಮ ತೆಗೆದುಕೊಳ್ಳಿ. ಮೈಕ್ರೋ ಕಂಟೇನ್ಮೆಂಟ್ ಜೋನ್ಗಳ ಬಗ್ಗೆ ಎಚ್ಚರವಹಿಸಿ ಎಂದು ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಕೊವಿಡ್ ನಿಯಂತ್ರಣಕ್ಕೆ ಪ್ರಧಾನಿ ಮೋದಿಯಿಂದ 4T ಸೂತ್ರ ನೀಡಲಾಗಿದ್ದು, ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್, ಟೀಕಾ ಈ ಸೂತ್ರಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಕೋವಿಡ್ ಪರೀಕ್ಷೆ, ಪತ್ತೆ ಹಚ್ಚುವುದು, ಚಿಕಿತ್ಸೆ, ಲಸಿಕೆಯನ್ನು ನೀಡುವ ಮೂಲಕ ಕೋವಿಡ್ ಹರಡುವಿಕೆಯ ಪ್ರಮಾಣವನ್ನು ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ಮೋದಿ ಹೇಳಿದ್ದಾರೆ