ಬೆಂಗಳೂರು, ಜು. 31: ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೊನಾ ಆರ್ಭಟ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಆ ಮೂಲಕ ಈ ಎರಡು ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.
ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಈ ಮಾರ್ಗಸೂಚಿ ಅನ್ವಯ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್ ನೆಗೆಟಿವ್ ರಿಪೋರ್ಟ್ ತರಬೇಕು. ಮೊದಲನೇ ಹಾಗೂ ಎರಡನೇ ಡೋಸ್ ಪಡೆದಿದ್ದರೂ ಅಥವಾ ಪಡೆಯದೇ ಇದ್ದರೂ 72 ಗಂಟೆಗಳ ಒಳಗೆ ಆರ್ಟಿಪಿಸಿಆರ್ ಮಾಡಿಸಿರುವ ನೆಗೆಟೀವ್ ವರದಿ ಕಡ್ಡಾಯಗೊಳಿಸಲಾಗಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇರಳದ ಗಡಿ ಭಾಗದಲ್ಲಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ಜಿಲ್ಲೆಗಳು ಹಾಗೂ ಮಹಾರಾಷ್ಟ್ರ ಗಡಿಯ ಭಾಗದ ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ವಾಹನಗಳ ಪ್ರಯಾಣಿಕರು, ಚಾಲಕರು, ಸಹಾಯಕರುಗಳನ್ನು ತಪಾಸಣೆಗೊಳಪಡಿಸಲು ಚೆಕ್ಪೋಸ್ಟ್ ಗಳಲ್ಲಿ ಅಗತ್ಯ ಸಿಬ್ಬಂದಿ ನೇಮಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.