ಹರಿದ್ವಾರ, ಏ. 15: ಉತ್ತರಾಖಂಡದಲ್ಲಿ ನಡೆಯುತ್ತಿರುವ ಕುಂಭಮೇಳ ಇದೀಗ ಕೊರೊನಾ ಹಾಟ್ ಸ್ಪಾಟ್ ಆಗುವ ಆತಂಕ ಎದುರಾಗಿದೆ. ಲಕ್ಷಾಂತರ ಭಕ್ತರು ಸಮಾಗಮಗೊಂಡಿರುವ ಕುಂಭ ಮೇಳದಲ್ಲಿ, ಕೊರೊನಾ ಸೋಂಕಿತರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ಕೊರೊನಾ ಪರೀಕ್ಷೆಗೆ ಒಳಪಡಬೇಕೆಂದು ಸೂಚಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಡಾ.ಕೆ.ಸುಧಾಕರ್, ಹರಿದ್ವಾರದಲ್ಲಿ ನಡೆಯುತ್ತಿರುವ ಪವಿತ್ರ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ವಾಪಸ್ಸಾದ ಬಳಿಕ ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ ಪ್ರತ್ಯೇಕಗೊಂಡು ಕೊರೊನಾ ಪರೀಕ್ಷೆಗೆ ಒಳಪಡಬೇಕು. ಕೊರೊನಾ ಪರೀಕ್ಷೆ ವರದಿಯಲ್ಲಿ ನೆಗಟೀವ್ ಬಂದ ನಂತರವಷ್ಟೇ ಯಾತ್ರಿಕರು ತಮ್ಮ ಎಂದಿನ ಕಾರ್ಯಗಳಲ್ಲಿ ತೊಡಗಬೇಕೆಂದು ಮನವಿ ಮಾಡಿದ್ದಾರೆ.
ಈ ನಡುವೆ, ಕುಂಭಮೇಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದರು, ಕುಂಭ ಮೇಳವನ್ನು ನಿಗದಿತ ದಿನಕ್ಕೂ ಮುನ್ನ ಮುಗಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂಬುದನ್ನು ಸ್ಥಳೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಏ.30ರವರೆಗೆ ನಡೆಯುವ ಕುಂಭಮೇಳದಲ್ಲಿ ಪಾಲ್ಗೊಂಡ ಭಕ್ತರು ಕೊರೊನಾ ಸೋಂಕಿಗೆ ತುತ್ತಾಗುವ ಎಲ್ಲಾ ಆತಂಕಗಳು ಎದುರಾಗಿದೆ.