ಹೊಸದಿಲ್ಲಿ, ಮೇ. 24: ದೇಶದೆಲ್ಲೆಡೆ ಆತಂಕ ಹುಟ್ಟಿಸಿರುವ ಮಹಾಮಾರಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ದೇಶದಲ್ಲಿ 3 ಲಕ್ಷದ ಗಡಿದಾಟಿದ್ದು, ಯುನೈಟೆಡ್ ಸ್ಟೇಟ್ಸ್ ಹಾಗೂ ಬ್ರೆಜಿ಼ಲ್ ನಲ್ಲಿ ಕೊರೊನಾ ಸೋಂಕಿನಿಂದ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ದೇಶದಲ್ಲಿ ಎರಡನೇ ಅಲೆಯ ಅಬ್ಬರ ಹೆಚ್ಚಾದ ಪರಿಣಾಮ ಸೋಂಕಿಗೆ ಬಲಿಯಾದವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮೇ 23ರ ಅಂತ್ಯಕ್ಕೆ ದೇಶದಲ್ಲಿ 4,452 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 3,03,751ಕ್ಕೆ ಏರಿಕೆಯಾಗಿದೆ.
ಉಳಿದಂತೆ ಭಾರತದಲ್ಲಿ ಮೇ 23 ರಂದು 2,22,704 ಹೊಸ ಪ್ರಕರಣಗಳನ್ನು ದಾಖಲಿಸಿದೆ. ತಮಿಳುನಾಡಿನಲ್ಲಿ 35,483 ಹೊಸ ಪ್ರಕರಣಗಳು ಕಂಡು ಬಂದಿದ್ದು, ಕರ್ನಾಟಕ (25,979) ಮತ್ತು ಕೇರಳ (25,820) ನಂತರದಲ್ಲಿವೆ. ಇನ್ನು ಮಹಾರಾಷ್ಟ್ರದಲ್ಲಿ ಒಂದೇ ದಿನದಂದು 894 ಮಂದಿ ಕೋವಿಡ್ ಸೋಂಕಿನಿಂದ ಮೃತರಾಗಿದ್ದು, ಕರ್ನಾಟಕದಲ್ಲಿ (624), ತಮಿಳುನಾಡಿನಲ್ಲಿ (422) ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ.