ಬೆಂಗಳೂರು, ಮಾ. 17: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಟ್ವೀಟ್ ವಾರ್ ಮುಂದುವರಿದಿದ್ದು, ಎಸ್ಐಟಿ ವಿಚಾರಣೆಗೆ ಒಳಪಟ್ಟಿರುವ ಸಿಡಿ ಜಾಲದ ಕಿಂಗ್ಪಿನ್ ನರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಯಾಗಿರುವ ಫೋಟೋವೊಂದನ್ನು ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ಆ ಮೂಲಕ ನೇರವಾಗಿ ಕಾಂಗ್ರೆಸ್ ನಾಯಕನಿಗೆ ಟಾಂಗ್ ನೀಡಿದೆ.
ಸಿಡಿ ಜಾಲದ ಪ್ರಮುಖ ಕಿಂಗ್ಪಿನ್ ಎನ್ನಲಾಗಿರುವ ನರೇಶ್ ಹಾಗೂ ಡಿಕೆ ಶಿವಕುಮಾರ್ ಒಟ್ಟಾಗಿರುವ ಫೋಟೋ ಅಪ್ಲೋಡ್ ಮಾಡಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ಎಂದು ಪ್ರಶ್ನಿಸಿದೆ. ಅಲ್ಲದೇ ಮಾಸ್ಟರ್ ಮೈಂಡ್ ಮತ್ತು ರಿಂಗ್ ಮಾಸ್ಟರ್ ಒಂದೇ ಫ್ರೇಮ್ನಲ್ಲಿ ಸಿಲುಕಿಕೊಂಡಿರುವುದಕ್ಕೂ ನನ್ನನ್ನು ಸಿಲುಕಿಸುವ ಕುತಂತ್ರ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ? ಎಂದು ಪ್ರಶ್ನಿಸಿದೆ.
ನಿನ್ನೆಯಷ್ಟೇ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಬಿಜೆಪಿ, ಆ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಹೇಳದೆ ಟಾಂಗ್ ನೀಡಿತ್ತು.