ದೇಶದಲ್ಲಿ ಮಾರ್ಚ್ 21 ರಿಂದ ಪ್ರಾರಂಭವಾದ ಇಂಧನ(Oil) ಬೆಲೆ ಏರಿಕೆ(Price Hike) ಪ್ರತಿದಿನ 40-80 ಪೈಸೆ ಹೆಚ್ಚಳ ಕಾಣುವ ಮೂಲಕ ಜನಸಾಮಾನ್ಯರಿಗೆ ಬೆನ್ನು ಬಿಡದ ಬೆತಾಳದಂತೆ ಆವರಿಸಿಕೊಂಡಿದೆ. ಪ್ರತಿದಿನ ಇಂಧನ ದರಗಳು ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ, ತಮಿಳುನಾಡು(Tamilnadu) ರಾಜ್ಯದ ಚೆಂಗಲ್ಪಟ್ಟು(Chengalpattu) ಜಿಲ್ಲೆಯ ಚೆಯ್ಯೂರ್ನಲ್ಲಿ(Cheyyur) ನವ ವಿವಾಹಿತ ದಂಪತಿಗೆ ಸ್ನೇಹಿತರೆಲ್ಲರೂ ಸೇರಿ ಕೊಟ್ಟರೇ ಒಂದೊಳ್ಳೆ ದುಬಾರಿ ಉಡುಗೊರೆ ಕೊಡಬೇಕು ಎಂದು ಮಾತನಾಡಿಕೊಂಡಿದ್ದಾರೆ.
15 ದಿನಗಳ ಅಂತರದಲ್ಲಿ ತಮಿಳುನಾಡಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 9 ರೂ.ಗೂ ಹೆಚ್ಚು ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್ ಪ್ರತಿ ಲೀಟರ್ ಗೆ 110.85 ರೂ. ಮತ್ತು ಡೀಸೆಲ್ 100.94 ರೂ.ಗೆ ಮಾರಾಟವಾಗುತ್ತಿದೆ. ಇದು ಅಲ್ಲಿನ ಜನಸಾಮಾನ್ಯರಿಗೂ ಸಂಕಷ್ಟವನ್ನು ತಂದೊಡ್ಡಿದೆ. ಸ್ನೇಹಿತರೆಲ್ಲರೂ ಹಾಕಿದ ಪ್ಲಾನ್ ಪ್ರಕಾರದಂತೆ ನವವಿವಾಹಿತ ದಂಪತಿಗಳಿಗೆ ಮದುವೆಯ ಉಡುಗೊರೆಯಾಗಿ ಒಂದು ಲೀಟರ್ ಪೆಟ್ರೋಲ್ ಮತ್ತು ಒಂದು ಲೀಟರ್ ಡೀಸೆಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೊದಮೊದಲು ಗಾಬರಿಯಾದ ನವಜೋಡಿ, ತದನಂತರ ನಗುನಗುತಲೇ ಗೆಳೆಯರ ಉಡುಗೊರೆಯನ್ನು ಸ್ವೀಕರಿಸಿದ್ದಾರೆ.
ಈ ಸಂದರ್ಭವನ್ನು ಬಳಸಿಕೊಂಡು, ಇತ್ತೀಚೆಗೆ ಚೆಯ್ಯೂರಿನಲ್ಲಿ ವಿವಾಹವಾದ ಗ್ರೇಸ್ ಕುಮಾರ್ ಮತ್ತು ಕೀರ್ತನಾ ಅವರ ಸ್ನೇಹಿತರು ದುಬಾರಿ ಉಡುಗೊರೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.