ನವದೆಹಲಿ, ಏ. 27: ದೇಶದಲ್ಲಿ ಕೊರೋನಾ ಪರಿಸ್ಥಿತಿ ಕೈ ಮೀರಿದ್ದು, ಪ್ರತಿದಿನ ಲಕ್ಷಾಂತರ ಕೇಸ್ ಗಳು ಪತ್ತೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ಅನೇಕ ದೇಶಗಳು ಭಾರತದ ವಿಮಾನಗಳಿಗೆ ನಿಷೇಧ ಹೇರಿವೆ. ಅಂತೆಯೇ ಆಸ್ಟ್ರೇಲಿಯಾ ಸರ್ಕಾರ ಕೂಡ ಸದ್ಯಕ್ಕೆ ಭಾರತೀಯ ವಿಮಾನಗಳಿಗೆ ನಿರ್ಬಂಧ ವಿಧಿಸಿದ್ದು, ಈ ಕುರಿತಂತೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಭಾರತದಲ್ಲಿ ದಿನೇ ದಿನೇ ಕೊರೋನಾ ಕೇಸ್ ಹೆಚ್ಚುತ್ತಿರುವ ಹಿನ್ನೆಲೆ, ಮೇ 15ರವರೆಗೆ ಭಾರತದ ವಿಮಾನಗಳಿಗೆ ನಿಷೇಧ ಹೇರಿ ಆಸ್ಟ್ರೇಲಿಯಾ ಸರ್ಕಾರ ಆದೇಶಿಸಿದೆ. ತಮ್ಮ ದೇಶಕ್ಕೆ ಕೊರೋನಾ ಹರಡುವ ಭೀತಿಯಿಂದ ಮುಂಜಾಗ್ರತೆಯಿಂದ ಈ ಕ್ರಮ ತೆಗೆದುಕೊಂಡಿದ್ದಾರೆ. ಕಳೆದ ವರ್ಷದಂತೆ ಪರಿಸ್ಥಿತಿ ಹದಗೆಡಬಾರದೆಂಬ ಉದ್ದೇಶದಿಂದ ಆಸ್ಟ್ರೇಲಿಯಾ ಪ್ರಧಾನಿ ಈ ನಿರ್ಧಾರಕ್ಕೆ ಬಂದಿದ್ದಾರೆ.
‘ಭಾರತದಿಂದ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸುವಂತೆ ನಾನು ಕಳೆದ ವಾರದ ಕೊನೆಯಲ್ಲಿ ಭಾರತದ ಪ್ರಧಾನಿಗೆ ಪತ್ರವೊಂದನ್ನು ಕಳುಹಿಸಿದ್ದೆ. ಅವರು ಪತ್ರವನ್ನು ಪರಿಗಣಿಸಿದ್ದಾರೆ ಎಂದು ತಿಳಿದು ಬಂದಿದೆ‘ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಭಾರತದ ವಿಮಾನಗಳನ್ನು ಸ್ಥಗಿತಗೊಳಿಸುವ ವಿಚಾರವಾಗಿ ಆಸ್ಟ್ರೇಲಿಯಾದ ರಾಷ್ಟ್ರೀಯ ಭದ್ರತಾ ಸಮಿತಿ ಇಂದು ಸಭೆ ಸೇರಿ ನಿರ್ಧಾರ ತೆಗೆದುಕೊಂಡಿದೆ.
ಕೊರೋನಾ ನಿಯಂತ್ರಣಕ್ಕಾಗಿ ಆಸ್ಟ್ರೇಲಿಯಾವು ಕಳೆದ ಮಾರ್ಚ್ ತಿಂಗಳಿನಿಂದ ಎಲ್ಲಾ ಗಡಿಗಳನ್ನು ಮುಚ್ಚಿದೆ. ಮರಳಿ ದೇಶಕ್ಕೆ ಬಂದಿರುವ ಪ್ರಯಾಣಿಕರು ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜೊತೆಗೆ ಎರಡು ವಾರಗಳ ಕಾಲ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿರಬೇಕು. ಚಿಕಿತ್ಸೆಯ ಖರ್ಚು-ವೆಚ್ಚ ಎಲ್ಲವೂ ನಿಮ್ಮದೇ ಎಂದು ಆಸ್ಟ್ರೇಲಿಯಾ ಸರ್ಕಾರ ದೇಶದ ಜನರಿಗೆ ಖಡಕ್ ಆದೇಶ ನೀಡಿದೆ.