ಚಂಡೀಘಡ, ಮೇ. 25: ಕಳೆದ ಕೆಲವು ದಿನಗಳ ಹಿಂದಷ್ಟೇ ಕೊರೊನಾಗೆ ತುತ್ತಾಗಿದ್ದ ಭಾರತದ ಅಥ್ಲಿಟಿಕ್ ದಂತಕತೆ ಮಿಲ್ಖಾ ಸಿಂಗ್ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
91 ವರ್ಷದ ಮಿಲ್ಖಾ ಸಿಂಗ್ ಅವರಿಗೆ ಮೇ 19ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಮನೆಯಲ್ಲಿಯೇ ಐಸೋಲೇಟ್ ಆಗಿದ್ದ ಅವರು, ವೈದ್ಯರ ಸೂಚನೆಯಂತೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದೆರಡು ದಿನಗಳಿಂದ ಯಾವುದೇ ಬಗೆಯ ಆಹಾರ ಸೇವಿಸದ ಪರಿಣಾಮ, ಮಿಲ್ಖಾ ಸಿಂಗ್ ಅವರಲ್ಲಿ ನಿಶ್ಯಕ್ತಿ ಕಾಣಿಸಿಕೊಂಡಿದೆ.
ಜೊತೆಗೆ ಉಸಿರಾಟದಲ್ಲೂ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಿಲ್ಖಾ ಸಿಂಗ್ ಅವರನ್ನು ಮೊಹಾಲಿಯ ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಿಲ್ಖಾ ಸಿಂಗ್ ಅವರ ಪುತ್ರ ಜೀವ್ ಮಿಲ್ಖಾ ಸಿಂಗ್, ತಮ್ಮ ತಂದೆ ಓರ್ವ ಬಲಿಷ್ಠ ಮನಸ್ಥಿತಿಯ ವ್ಯಕ್ತಿ. ಯಾವಾಗಲೂ ಪಾಸಿಟಿವ್ ಚಿಂತನೆ ಮಾಡ್ತಾರೆ, ಹೀಗಾಗಿ ಅವರು ಶೀಫ್ರವೇ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.