ಪುಣೆ, ಜ. 21: ಈಗಾಗಲೇ ಕೋರೋನದಿಂದ ತತ್ತರಿಸಿ ಹೋದ ಜನರು ಕೋವಿಡ್‌ಗೆ ಕೊನೆಗೂ ಲಸಿಕೆ ಸಿಕ್ಕಿತಲ್ಲ ಎನ್ನುವ ಸಮಾಧಾನದಲ್ಲಿದ್ದ ಸಂದರ್ಭದಲ್ಲಿಯೇ, ಲಸಿಕೆ ತಯಾರಿಕಾ ಘಟಕವಾದ ಪುಣೆಯ ಸೆರಂ ಇನ್ಸ್ಟಿಟ್ಯೂಟ್ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಪುಣೆಯ ಮಂಜ್ರಿ ಪ್ರದೇಶದಲ್ಲಿರುವ ಸೆರಂ ಸಂಸ್ಥೆಯ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಲ್ಲಿನ ವಿಜ್ಞಾನಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸ್ಥಳಕ್ಕೆ ಎಂಟು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಪ್ರಕ್ರಿಯೆಗೆ ಮುಂದಾಗಿದೆ. ಈ ಬೆಂಕಿ ಅನಾಹುತಕ್ಕೆ ಇನ್ನು ಕಾರಣ ತಿಳಿದು ಬಂದಿಲ್ಲ. ಸಂಸ್ಥೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಅನಾಹುತವಾಗಿಲ್ಲ ಎಂದು ವರದಿಯಾಗಿದೆ. ಈ ಅಗ್ನಿ ಅನಾಹುತದಿಂದ ಕೋವಿಶೀಲ್ಡ್ ಲಸಿಕೆಗಳಿಗೆ ಯಾವುದೇ ಧಕ್ಕೆಯಾಗಿಲ್ಲ. ಲಸಿಕೆ ಸಂಗ್ರಹಿಸಿಟ್ಟಿರುವ ಕಡೆಗೆ ಬೆಂಕಿ ಪಸರಿಸಿಲ್ಲ ಎಂದು ತಿಳಿದುಬಂದಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಎಂಬ ಬ್ರಿಟಿಷ್ ಕಂಪನಿ ಸಹಯೋಗದಲ್ಲಿ ಸೆರಂ ಕೋವಿಶೀಲ್ಡ್ ಲಸಿಕೆ ತಯಾರಿಸಿದೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕೇಂದ್ರವಾಗಿರುವ ಸೆರಂ ಸಂಸ್ಥೆ 100 ಎಕರೆ ಪ್ರದೇಶದದಲ್ಲಿ ವ್ಯಾಪಿಸಿದೆ.
ಲಸಿಕೆ ಉತ್ಪಾದಿಸುವ ಕಟ್ಟಡದಿಂದ ಕೊಂಚ ದೂರವಿರುವ ಮಂಜಾರಿ ಕಟ್ಟಡ ಸಂಕೀರ್ಣದಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಇದು ವಿಶೇಷ ಆರ್ಥಿಕ ವಲಯದ ಒಂದು ಭಾಗವಾಗಿದೆ ಎಂದು ತಿಳಿದುಬಂದಿದೆ.ಸೆರಂ ಸಂಸ್ಥೆಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಮಂಜರಿ ಕಂಕೀರ್ಣವನ್ನು ಎಂಟು- ಒಂಬತ್ತನೇ ಸ್ತರ ನಿರ್ಮಿಸಲಾಗುತ್ತಿತ್ತು. ಬೆಂಕಿ ಅನಾಹುತಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ, ನಿರ್ಮಾಣ ಹಂತದ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.