ಕಡಿಮೆ ಸಗಣಿಯಲ್ಲಿ(Cow Dung) ಉತ್ಕೃಷ್ಟ ಗೊಬ್ಬರ(Manure/Fertilizers) ಮತ್ತು ಬೆಳೆ.
ನಾವು ಸಗಣಿಯನ್ನೇ ಗೊಬ್ಬರ ಎಂದು ತಿಳಿದುಕೊಂಡಿದ್ದೇವೆ, ಸಗಣಿಯೇ ಗೊಬ್ಬರವಲ್ಲ. ಅರೆಬೆಂದ ಗೊಬ್ಬರ ಭೂಮಿಗೆ ಸೇರಿದಾಗ ವಿಷ ಅನಿಲ ಬಿಡುಗಡೆಗೊಂಡು ಬೆಳೆಗಳ ಬೇರು ಸುಟ್ಟು ಹೋಗುತ್ತದೆ.

ಬೆಳೆಗಳು ಸಾಕಷ್ಟು ರೋಗ ಮತ್ತು ಕೀಟಬಾದೆಗೆ ತುತ್ತಾಗುತ್ತವೆ. ಆದ್ದರಿಂದ ಇದನ್ನು ರೈತರು ಭೂಮಿಗೆ ಹಾಕದೇ ಇರುವುದೇ ಒಳ್ಳೆಯದು. ಭೂಮಿಗೆ ಗೊಬ್ಬರ ಪೂರೈಸಲು ಸಾಕಷ್ಟು ಸಂಖ್ಯೆಯ ಹಸು/ಎಮ್ಮೆಗಳು ಬೇಕು ಎಂಬ ತಪ್ಪು ಕಲ್ಪನೆಯಿಂದ ರಸಗೊಬ್ಬರ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ತಿಪ್ಪೆಗುಂಡಿ ಗಾಳಿಯಾಡುವಂತೆ ಅಗೆಯಬೇಕು, ಮಳೆಗಾಲದಲ್ಲಿ ಮಳೆ ನೀರು ತುಂಬಿಕೊಳ್ಳದಂತೆ ನೋಡಿಕೊಳ್ಳಬೇಕು. ಇವೆಲ್ಲಾ ಸಮಯಕ್ಕೆ ಸರಿಯಾಗಿ ಮಾಡದೇ ಹೋದಾಗ ಅದು ಕೊಳೆಯಲಾರಂಬಿಸಿ ಕೆಟ್ಟ ವಾಸನೆ ಬಂದು, ಅರೆಬರೆ ಕೊಳೆತ ಗೊಬ್ಬರವಾಗುತ್ತದೆ.
ಸಗಣಿಯಲ್ಲಿರುವ ನೈಟ್ರೇಟ್(Nitrate) ಅಂಶ ಮಳೆ ನೀರಿನೊಂದಿಗೆ ಭೂಮಿಯಲ್ಲಿ ಇಂಗಿ ಬೋರ್ವೆಲ್ ನೀರು ಉಪ್ಪಾಗುತ್ತಿದೆ. ಗೊಬ್ಬರದ ಗುಂಡಿ ಮಾಡದೇ, ಭೂಮಿಯ ಮೇಲೆ ನೇರವಾಗಿ ಬಿಸಿಲು ಬೀಳುವ ಕಡೆ ಗುಡ್ಡೆ ಹಾಕುವುದರಿಂದ 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ಇದ್ದಾಗ ಸಗಣಿ ರಾಶಿಯಿಂದ ಸರಾಜನಕ ಅಂಶ ಆವಿಯಾಗಿ ಹೋಗುತ್ತದೆ. ಗೊಬ್ಬರ ಕೊಳೆಯಬಾರದು, ಕಳಿಯಬೇಕು. ಹಣ್ಣು ಕೊಳೆತರೆ ತಿನ್ನಲಾಗುವುದಿಲ್ಲ. ಕಳಿತ ಬಾಳೆಹಣ್ಣು ಅನ್ನುವುದು ಅದಕ್ಕೆ, ಗೊಬ್ಬರವು ಸಹ ಹಾಗೆಯೇ.

ತಿಪ್ಪೆಗುಂಡಿಯಲ್ಲಿನ ಲೋಪ ಸರಿಪಡಿಸಲು ಮತ್ತು ಗುಂಡಿ ಅಗೆಯುವ ಶ್ರಮ ತಪ್ಪಿಸಿ ಎಲ್ಲಾ ರೀತಿಯಿಂದಲು ಉತ್ತಮವಾದ, ಹೆಚ್ಚು ಶ್ರಮವಿಲ್ಲದ, ಸರಳ ವಿಧಾನವೆಂದರೆ ನೆಡೆಪ್ ವಿಧಾನ. ಮಹಾರಾಷ್ಟ್ರದ ರೈತ ನಾರಾಯಣ ಡಿ ಪಂಧರಿಪಾಂಡೆ ಎನ್ನುವವರು ಈ ವಿಧಾನ ಕಂಡುಹಿಡಿದದ್ದುದರಿಂದ ಇದಕ್ಕೆ ಅವರ ಹೆಸರಿನನ್ವಯ 'ನೆಡೆಪ್ ' ಎಂದು ಕರೆಯಲಾಗಿದೆ. ಭೂಮಿಗೆ ನೇರವಾಗಿ ಸಗಣಿ ಹಾಕೋದ್ರಿಂದ ಅದರಲ್ಲಿರುವ ವಿಷ ಅನಿಲ ಬಿಡುಗಡೆಯಾಗುತ್ತೆ, ಸಗಣಿಯಲ್ಲಿರುವ ಹೈಡ್ರೋಸಲ್ಫೈಡ್, ಕಾರ್ಬನ್ ಮೊನೊಕ್ಸೈಡ್, ಮಿಥೇನ್ ಇವುಗಳು ಬೆಳೆಯ ಬೇರು ಸುಡಲು ಕಾರಣವಾಗುತ್ತದೆ.
ರೋಗಕಾರಕ ವೈರಸ್, ಬ್ಯಾಕ್ಟೀರಿಯಾ ಉತ್ಪತಿಯಾಗುತ್ತೆ. ಸಗಣಿಯಲ್ಲಿರುವ ಕಳೆ ಬೀಜಗಳು ಮರು ಹುಟ್ಟು ಪಡೆಯುತ್ತೆ, ಸೂಕ್ತ ಸಾರಜನಕ, ಇಂಗಾಲ ಅನುಪಾತ ಇಲ್ಲದೇ ಹೋದ್ರೆ ಪೋಷಕಾಂಶ ದೊರೆಯುವುದಿಲ್ಲ. ಇವೆಲ್ಲಾ ಕಾರಣಕ್ಕೆ ಕಾಂಪೋಸ್ಟ್ ಗೊಬ್ಬರ ಮಾಡುವುದು. ಉತ್ತಮ ಕಾಂಪೋಸ್ಟ್ ತಯಾರು ಮಾಡಲು ಬಹಳ ಕಡಿಮೆ ಪ್ರಮಾಣದ ಸಗಣಿ ಸಾಕು. ಸಗಣಿ ಕಾಂಪೋಸ್ಟ್ ಗೊಬ್ಬರ ಮಾಡಲು ಬೇಕಾದ ಕಚ್ಚಾವಸ್ತು ಮತ್ತು ಆಕ್ಟಿವೇಟರ್, ಪ್ರಮೋಟರ್, ಕ್ಯಾಟಲಿಸ್ಟ್ ಮಾತ್ರ ಎಂಬುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಕಾಂಪೋಸ್ಟ್ : ಸಸ್ಯಗಳ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದು ಕಾಂಪೋಸ್ಟ್ ಗೊಬ್ಬರದಿಂದ ಮಾತ್ರ ಸಾಧ್ಯ. ಯಾವುದೇ ಬೆಳೆಗೆ ಪ್ರತಿ 100 ಚದರಡಿ ಪ್ರದೇಶಕ್ಕೆ 20 ಕೆಜಿ ಕಾಂಪೋಸ್ಟ್ ಗೊಬ್ಬರ ಹಾಕಿ ಉತ್ತಮ ಬೆಳವಣಿಗೆ ಕಾಣಬಹುದು,33’33’=1089 ಚದರಡಿ =1 ಗುಂಟೆ =200 ಕೆಜಿ,1 ಎಕ್ರೆಗೆ 40 ಗುಂಟೆ ಪ್ರದೇಶಕ್ಕೆ 8 ಟನ್ ಕಾಂಪೋಸ್ಟ್ ಬಳಕೆ ಮಾಡುವುದರಿಂದ ಸಾರಜನಕ(N):120 ಕೆಜಿ,ರಂಜಕ(P):50 ಕೆಜಿ , ಪೊಟಾಷ್(K):80 ಕೆಜಿ ಒದಗಿಸಬಹುದು.
- 8 ಟನ್ ಕಾಂಪೋಸ್ಟ್ ತಯಾರಿಕೆಗೆ ಬೇಕಾಗುವ ಸಗಣಿ ಪ್ರಮಾಣ ಕೇವಲ 400 ಕೆಜಿ. ಒಂದು ಎಕ್ರೆಗೆ 400 ಕೆಜಿ ಸಗಣಿಯಿಂದ ಯಾವುದೇ ಬೆಳೆಗೆ ಬೇಕಾಗುವ ಪೋಷಕಾಂಶ ಒದಗಿಸಿ ಉತ್ತಮ ಇಳುವರಿ ಪಡೆಯಬಹುದು.
- ಕಾಂಪೋಸ್ಟ್ ತೊಟ್ಟಿ :ಪೂರ್ವ -ಪಶ್ಚಿಮಕ್ಕೆ: 6 ಅಡಿ ಅಗಲ, ಉತ್ತರ -ದಕ್ಷಿಣಕ್ಕೆ : 10 ಅಡಿ ಉದ್ದ ಮತ್ತು ತೊಟ್ಟಿಯ ಎತ್ತರ : 3 ಅಡಿ.ತೊಟ್ಟಿಯ ತಳಭಾಗ ಕಾಂಕ್ರೀಟ್ ಮಾಡದೇ ಆಗೆಯೇ ಬಿಡಬೇಕು. ಸೂಕ್ಷ್ಮಜೀವಿಗಳು ಮಣ್ಣಿನ ಮೂಲಕ ಬರಲು ಅನುಕೂಲವಾಗುವಂತೆ ಮಣ್ಣಿನ ನೆಲವಿರಬೇಕು. 10’6‘3′ ತೊಟ್ಟಿಯಲ್ಲಿ 90-120 ದಿನಗಳಲ್ಲಿ 2500 ಕೆಜಿ.ವರ್ಷಕ್ಕೆ 3 ಬಾರಿ ಒಂದು ತೊಟ್ಟಿಯಿಂದ 7.5 ಟನ್ ಕಾಂಪೋಸ್ಟ್ ತಯಾರಿಸಬಹುದು.

ಇದು ಒಂದು ಎಕ್ರೆ ಪ್ರದೇಶಕ್ಕೆ ಒಂದು ವರ್ಷಕ್ಕೆ ಸಾಕಾಗುವ ಪ್ರಮಾಣ.
ಬೇಕಾಗುವ ಪದಾರ್ಥ:
1)150 ಕೆಜಿ ಸಗಣಿ
(ಯಾವುದೇ ಸಸ್ಯಾಹಾರಿ ಪ್ರಾಣಿ/ಪಕ್ಷಿಗಳ ಸಗಣಿ/ಹಿಕ್ಕೆ ಬಳಸಬಹುದು. ರೈತರು ಹೆಚ್ಚಾಗಿ ಹಸು ಸಾಕಾಣಿಕೆ ಮಾಡುವುದರಿಂದ ಹಸುವಿನ ಸಗಣಿ ಬಳಕೆ ರೂಡಿಯಲ್ಲಿದೆ)
2)1350 ಕೆಜಿ ಕೃಷಿ ತ್ಯಾಜ್ಯ
(3 ಭಾಗ ಒಣ ತ್ಯಾಜ್ಯ : 810 ಕೆಜಿ,2 ಭಾಗ ಹಸಿ ತ್ಯಾಜ್ಯ :540 ಕೆಜಿ )
3)1500 ಕೆಜಿ ಚೌಳು ಇಲ್ಲದ ಮಣ್ಣು.
ತೊಟ್ಟಿಯ ಪ್ರತಿ ಪದರದಲ್ಲಿ 27 ಕೆಜಿ ಒಣ ತ್ಯಾಜ್ಯ,18 ಕೆಜಿ ಹಸಿ ತ್ಯಾಜ್ಯ,5 ಕೆಜಿ ಸಗಣಿ(70 ಲೀಟರ್ ನೀರಿನಲ್ಲಿ ಕಲಸಿ),50 ಕೆಜಿ ಮಣ್ಣು ಈ ಪ್ರಕಾರ 30 ಪದರ ಹಾಕುವುದು. ಮೂವತ್ತನೇ ಪದರದ ಮೇಲೆ 4 ಇಂಚು ಮಣ್ಣು ಮುಚ್ಚಿ ಸಗಣಿಯಿಂದ ಸಾರಿಸುವುದು.90-120 ದಿನಗಳಲ್ಲಿ ಗೊಬ್ಬರ ಸಿದ್ದಗೊಳ್ಳುತ್ತದೆ. ಈ ಗೊಬ್ಬರವನ್ನು 1 ವರ್ಷ ಕಾಲ ಸಂಗ್ರಹಿಸಿ ಇಟ್ಟುಕೊಳ್ಳಬಹುದು.
ಮಾಹಿತಿ ಕೃಪೆ : ಪರಿಸರ ಪರಿವಾರ