ರಾಹುಲ್ಪಿಂಡಿ, ಫೆ. 08: ಆರಂಭಿಕ ಬ್ಯಾಟ್ಸ್ಮನ್ ಐಡನ್ ಮಾರ್ಕ್ರಮ್(108) ಶತಕದ ನಡುವೆಯೂ ಪಾಕಿಸ್ತಾನದ ಹಸನ್ ಅಲಿ(60ಕ್ಕೆ 5) ಶಹೀನ್ ಅಫ್ರೀದಿ(51ಕ್ಕೆ 4) ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಅತಿಥೇಯ ಪಾಕಿಸ್ತಾನದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 95 ರನ್ಗಳ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಪಾಕ್ ತಂಡ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
ಇಲ್ಲಿನ ರಾಹುಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 370 ರನ್ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ, ಉತ್ತಮ ಪೈಪೋಟಿ ನೀಡಿತು. ಭರ್ಜರಿ ಪ್ರದರ್ಶನ ನೀಡಿದ ಮಾರ್ಕ್ರಮ್ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 5ನೇ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿ ನಿಂತರು. 241 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಸೌತ್ ಆಫ್ರಿಕಾ, ಕೇವಲ 33 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು.
ಪಾಕಿಸ್ತಾನದ ಪರ ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಶಹೀನ್ ಅಫ್ರೀದಿ 4 ಹಾಗೂ ಹಸನ್ ಅಲಿ 5 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಸೌತ್ ಆಫ್ರಿಕಾ ಪರ ವ್ಯಾನ್ ಡರ್ ಡುಸೆನ್(48) ಟೆಂಬಾ ಬವೂಮಾ(60) ರನ್ಗಳಿಸಿದರೆ ತಂಡಕ್ಕೆ ಯಾವುದೇ ಅನುಕೂಲವಾಗಲಿಲ್ಲ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಹಸನ್ ಅಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರೆ, ಮೊಹಮ್ಮದ್ ರಿಜ್ವಾನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.