ಹೊಸದಿಲ್ಲಿ, ಜ. 01: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಸರಣಿಯ 3ನೇ ಟೆಸ್ಟ್ ಪಂದ್ಯಕ್ಕೆ ಮಹತ್ವದ ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯಲಿದೆ.
ಇತ್ತೀಚಿಗೆ ಮುಕ್ತಾಯಗೊಂಡ 2ನೇ ಟೆಸ್ಟ್ ವೇಳೆ ಗಾಯಗೊಂಡ ವೇಗಿ ಉಮೇಶ್ ಯಾದವ್, ಈಗಾಗಲೇ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಉಮೇಶ್ ಯಾದವ್ ಸ್ಥಾನಕ್ಕೆ ಯುವ ವೇಗಿ ಟಿ.ನಟರಾಜನ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈಗಾಗಲೇ ಆಸೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ವೇಗಿ ನಟರಾಜನ್, ಗಮನಾರ್ಹ ಪ್ರದರ್ಶನ ನೀಡಿದ್ದರು. ಇದೀಗ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನಟರಾಜನ್, ಸರಣಿಯ ಮುಂದಿನ 2 ಪಂದ್ಯಗಳಲ್ಲೂ ಆಡುವ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ರೋಹಿತ್ ಉಪನಾಯಕ:
ಇನ್ನೂ, ಆಸ್ಟ್ರೇಲಿಯಾ ವಿರುದ್ಧದ ಮುಂದಿನ 2 ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದು ತಂಡಕ್ಕೆ ಮರಳಿರುವ ರೋಹಿತ್ ಶರ್ಮಾ ಅವರಿಗೆ ತಂಡದ ಉಪ ನಾಯಕನಾಗಿ ನಿಯೋಜನೆಗೊಂಡಿದ್ದಾರೆ. ಈಗಾಗಲೇ ಕಾಂಗರೂ ನಾಡಿಗೆ ತೆರಳಿರುವ ರೋಹಿತ್, ಇತ್ತೀಚಿಗೆ ತಂಡವನ್ನು ಕೂಡಿಕೊಂಡು, ಅಭ್ಯಾಸವನ್ನು ಆರಂಭಿಸಿದ್ದಾರೆ. ಇದೀಗ ಸರಣಿಯ ಮುಂದಿನ 2 ಟೆಸ್ಟ್ ಪಂದ್ಯಕ್ಕೆ ತಂಡದ ಉಪ ನಾಯಕನಾಗಿ ಆಡಲಿದ್ದಾರೆ. ಉಭಯ ತಂಡಗಳ ನಡುವಿನ ತೃತೀಯ ಟೆಸ್ಟ್, ಜ.7ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.