ನವದೆಹಲಿ ಡಿ 23 : ಗಣ್ಯ ವ್ಯಕ್ತಿಗಳ ರಕ್ಷಣೆಗಾಗಿ ಸಿಆರ್‌ಪಿಎಫ್ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲು ಕೆಂದ್ರ ಸರ್ಕಾರ ನಿರ್ಧರಿಸಿದೆ. ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವದ್ರಾ, ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಗುರುಶರಣ್ ಕೌರ್ ಮತ್ತು ಮಾಜಿ ಪ್ರಧಾನಿಯಂತಹ ಇತರ ಝಡ್ ಪ್ಲಸ್ ಗಣ್ಯರ ರಕ್ಷಣೆಗಾಗಿ 32 ಸಿಆರ್‌ಪಿಎಫ್ ಮಹಿಳಾ ಕಮಾಂಡೋಗಳ ಮೊದಲ ಬ್ಯಾಚ್ ಅನ್ನು ಶೀಘ್ರದಲ್ಲೇ ನಿಯೋಜಿಸಲಾಗುತ್ತಿದೆ.
ಮಹಿಳಾ ಕಮಾಂಡೋಗಳನ್ನು ಬಹು ಕರ್ತವ್ಯಗಳಿಗೆ ನಿಯೋಜಿಸಲಾಗುತ್ತುದೆ, ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ವಿಐಪಿ ರಾಜಕಾರಣಿಗಳ ರಕ್ಷಣೆಗೆ ಇವರು ಜೊತೆಗೂಡಬಹುದು ಎಂದು ಮೂಲಗಳು ತಿಳಿಸಿವೆ.
ಶಸ್ತ್ರಾಸ್ತ್ರಗಳಿಲ್ಲದೆ ಶತ್ರುಗಳ ವಿರುದ್ಧ ಹೋರಾಡುವುದು, ಎಲ್ಲ ರೀತಿಯ ಶಸ್ತ್ರಗಳ ಬಳಸುವ ನೈಪುಣ್ಯತೆ, ಭದ್ರತೆಯ ಮೇಲೆ ಹದ್ದಿನ ಕಣ್ಣಿಡುವುದು, ವಿಐಪಿಗಳಿಗೆ ಎದುರಾಗುವ ಬೆದರಿಕೆಯನ್ನು ಪತ್ತೆ ಹಚ್ಚಿ ಭದ್ರತೆ ಒದಗಿಸುವುದು ಹೀಗೆ 10 ವಾರಗಳ ಕಠಿಣ ತರಬೇತಿಯನ್ನು ಈ ಮಹಿಳಾ ಕಮಾಂಡೋಗಳ ತಂಡ ಪೂರೈಸಿದೆ.
ಈ ಕಮಾಂಡೋಗಳನ್ನು ಜನವರಿಯಿಂದ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಾಗುತ್ತಿದೆ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ವೇಳೆ ವಿವಿಐಪಿಗಳು ತಂಗುವ ಮನೆಗಳನ್ನು ಪರಿಶೀಲಿಸುವ ಜವಾಬ್ದಾರಿ ಈ ಮಹಿಳಾ ಕಮಾಂಡೋಗಳ ಮೇಲಿದೆ ಎಂದು ಮೂಲಗಳು ತಿಳಿಸಿವೆ.
ವಿಐಪಿಗಳ ಗೃಹ ಸಂರಕ್ಷಣಾ ತಂಡದ ಭಾಗವಾಗಿ ಕಮಾಂಡೋಗಳನ್ನು ನಿಯೋಜಿಸಲಾಗುತ್ತದೆ ಮತ್ತು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾದಲ್ಲಿ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಅಗತ್ಯವಿದ್ದಲ್ಲಿ ಗಣ್ಯರ ರಕ್ಷಣೆಗೆ ಇವರು ನಿಲ್ಲುತ್ತಾರೆ ಎಂದು ಮೂಲಗಳು ತಿಳಿಸಿವೆ.