ಬೆಂಗಳೂರು ಫೆ 02: ನಿನ್ನೆ ಕೇಂದ್ರ ಸಚಿವೆ ಮಂಡಿಸಿದ್ದ ಬಜೆಟ್‌ಗೆ ವಿವಿಧ ರೀತಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಕೇಂದ್ರದ ಹಣಕಾಸು ಸಚಿವರಾದ ನಿರ್ಮಾಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಭಾರತದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದ್ದು ಜನ ಸಾಮಾನ್ಯರಿಗೆ, ರೈತರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಆಶಾದಾಯಕವಾಗಿದೆ. ಅಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ಮಾಡಿರುವುದು ದೂರ ದೃಷ್ಟಿಯ ಬಜೆಟ್ಗೆ ಹಿಡಿದ ಕೈಗನ್ನಡಿಯಂತಿದೆ. 60 ಲಕ್ಷ ಉದ್ಯೋಗಗಳ ಸೃಷ್ಟಿಯ ಗುರಿಯ ಜೊತೆಗೆ ಆರ್ಥಿಕತೆಯನ್ನು ಉನ್ನತಿಗೆ ಕೊಂಡೊಯ್ಯವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿರುವುದು ದೇಶದ ಅಭಿವೃದ್ಧಿಯ ದಿಕ್ಸೂಚಿಯಂತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಶಾಸಕರಾದ ಸಿ.ಟಿ. ರವಿ ಅವರು ತಿಳಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವುದಕ್ಕೆ ‘ವನ್ ಕ್ಲಾಸ್ ವನ್ ಟಿವಿ’ ಆರಂಭಿಸಿರುವುದು ಶ್ಲಾಘನೀಯ. ಪ್ರಧಾನಿ ‘ಇ-ವಿದ್ಯಾ’ ಯೋಜನೆ ಅಡಿಯಲ್ಲಿ 200 ಚಾನೆಲ್ಗಳು ಅಸ್ತಿತ್ವಕ್ಕೆ ಬರಲಿದ್ದು ಶಿಕ್ಷಣಕ್ಕೆ ಪೂರಕವಾದ ಯೋಜನೆ ಆಗಿದೆ. ಕೆನ್ ಬೆಟ್ವಾ ಯೋಜನೆಯ ಅನುಷ್ಠಾನದ ಮೂಲದ ಅಂದಾಜು ವೆಚ್ಚ 44,605 ಕೋಟಿಯಲ್ಲಿ 9 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನಗಳು, 62 ಲಕ್ಷ ಜನರಿಗೆ ಕುಡಿಯುವ ನೀರು, 103 ಮೆಗಾವ್ಯಾಟ್ ಜಲವಿದ್ಯುತ್. 27 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿ ಇದ್ದು ಭಾರತದಲ್ಲಿ ವಿದ್ಯುತ್ ಉತ್ಪಾದನೆಯ ಸ್ವಾವಲಂಬಿತನೆಕ್ಕೆ ಸಾಕ್ಷಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕಾವೇರಿ–ಪೆನ್ನಾರ್ ಸೇರಿ ದೇಶದ 5 ನದಿಗಳ ಜೋಡಣೆಗೆ ಅನುಮೋದನೆ ನೀಡಿರುವುದು ಕರ್ನಾಟದ ಅಭಿವೃದ್ಧಿಗೆ ದೊಡ್ಡ ಕೊಡುಗೆ ಎಂದರೆ ತಪ್ಪಲ್ಲ. ಗೋದಾವರಿ–ಕೃಷ್ಣ, ಕೃಷ್ಣ–ಪೆನ್ನಾರ್, ನರ್ಮದಾ–ಗೋದಾವರಿ ನದಿಗಳ ಜೋಡಣೆಗೆ ಒಪ್ಪಿಗೆ ನೀಡಿರುವುದು ಸಮಗ್ರ ಅಭಿವೃದ್ಧಿಗೆ ಉತ್ತಮವಾದ ಯೋಜನೆಯಾಗಿದೆ. ಇದಕ್ಕಾಗಿ ಈ ಬಜೆಟ್ನಲ್ಲಿ 44 ಸಾವಿರ ಕೋಟಿ ಹಣ ಮೀಸಲಿಡಲಾಗಿದ್ದು, ಇದು ರೈತರ ಪಾಲಿಗೆ ಆಶಾದಾಯಕವಾದ ಯೋಜನೆಯಾಗಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ. 2022-23ನೇ ಸಾಲಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲು ರೂ 48,000 ಕೋಟಿ ಮಂಜೂರು ಮಾಡಿರುವುದು ಅದ್ಭುತವಾದ ಯೋಜನೆಯಾಗಿದೆ.

ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸಲು ದೇಶಾದ್ಯಂತ 75 ಜಿಲ್ಲೆಗಳಲ್ಲಿ, 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿರುವುದು ಶ್ಲಾಘನಾರ್ಹ ಎಂದು ಅವರು ತಿಳಿಸಿದ್ದಾರೆ.
ಡಿಜಿಟಲ್ ಬ್ಯಾಂಕಿಂಗ್ ತನ್ನ ಪ್ರಯೋಜನಗಳನ್ನು ಗ್ರಾಹಕ ಸ್ನೇಹಿಯಾಗಿ ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲಿದ್ದು, ಆರ್ಥಿಕಾಭಿವೃದ್ಧಿಗೆ ಪೂರಕವಾಕವಾಗಲಿವೆ. 400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು. ಸಾರ್ವಜನಿಕರ ಒಳಿತಿಗಾಗಿ ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮವಾಗಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ಆರ್ಥಿಕ ಬೆಳವಣಿಗೆ ಅಂದಾಜು ಶೇ.9.2 ರಷ್ಟಿರುವುದು ದೇಶದ ಪ್ರಗತಿಯ ಸಂಕೇತ. ಒಟ್ಟಾರೆ ಅರ್ಥವ್ಯವಸ್ಥೆಯನ್ನು ಸರಿಪಡಿಸಲು ಟೊಂಕಕಟ್ಟಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.