ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿದ ನಂತರವೂ, ಕೋಟ್ಯಾಂತರ ಮುಸ್ಲಿಂಮರನ್ನು ಇಲ್ಲಿಯೇ ಉಳಿಸಿಕೊಳ್ಳಲು ಅವಕಾಶ ನೀಡಿದ್ದು, ಹಿಂದೂಗಳ ಹೃದಯ ಔದಾರ್ಯವನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದರು. ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಮುದಾಯ ಒಂದು ದಿನದ ಬಂದ್ ಆಚರಿಸಿದಕ್ಕೆ ಪ್ರತಿಕ್ರಿಯೆಯಾಗಿ ಕರಾವಳಿಯ ಅನೇಕ ಹಿಂದೂಗಳ ಧಾರ್ಮಿಕ ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದ ಕ್ರಮವನ್ನು ಸಮರ್ಥಿಸಿಕೊಂಡು ಮಾತನಾಡಿದ ಅವರು, ಹಿಂದೂಗಳ ಮಟನ್ ಸ್ಟಾಲ್ ನಲ್ಲಿ ಮುಸ್ಲಿಂಮರು ಮಾಂಸ ಖರೀದಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ನಾವು ಹಿಂದೂಗಳು ಜಗತ್ತಿನ ಎಲ್ಲ ಧರ್ಮಗಳಿಗೂ ನೆಲೆ ನೀಡಿದ್ದೇವೆ. ಔದಾರ್ಯತೆ ಎಂಬುದು ನಮ್ಮ ರಕ್ತದಲ್ಲಿದೆ. ಇನ್ನು ಜಾತ್ಯಾತೀತತೆಯನ್ನು ಬೇರೆಯವರಿಗೆ ಬೋಧಿಸುವ ಮುನ್ನ ನೀವು ಜಾತ್ಯಾತೀತರಾಗಿ ಎಂದರು. ಇನ್ನು ಜಾತ್ಯಾತೀತತೆಯ ಬಗ್ಗೆ ಭಾಷಣ ಮಾಡುವವರು, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿದ್ದ ಹಿಂದೂಗಳು ಎಲ್ಲಿ ಹೋದರು? ದೇಶ ವಿಭಜನೆಯಾದಾಗ ಪಾಕಿಸ್ತಾನದಲ್ಲಿದ್ದ 40 ಲಕ್ಷ ಹಿಂದೂಗಳನ್ನು ಹತ್ಯೆ ಮಾಡಿದ್ದು ಯಾರು? ಹಿಂದೂಗಳ ಹತ್ಯೆ ಮಾಡಿ ರೈಲುಗಳಲ್ಲಿ ತುಂಬಿ ಕಳುಹಿಸಿದ್ದು ಯಾರು?
ಬಾಂಗ್ಲಾದೇಶದಲ್ಲಿನ ಇಸ್ಕಾನ್ ಮಂದಿರಕ್ಕೆ ಬೆಂಕಿ ಇಟ್ಟು, ಮಂದಿರವನ್ನು ದೋಚಿದ್ದು ಯಾರು? ಇನ್ನು ಶೇಕಡಾ ೯೦ ರಷ್ಟು ಹಿಂದೂಗಳಿರುವ ಕಡೆ ಶೇಕಡಾ ೧೦ರಷ್ಟು ಇರುವ ಮುಸ್ಲಿಂಮರು ಸುರಕ್ಷಿತವಾಗಿ ಬದುಕಬಹುದು. ಆದರೆ ಶೇಕಡಾ ೫೦ ರಷ್ಟು ಇರುವ ಮುಸ್ಲಿಂಮರ ನಡುವೆ ಶೇಕಡಾ ೫೦ರಷ್ಟು ಇರುವ ಹಿಂದೂಗಳು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಹೀಗಾಗಿಯೇ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳು ನಿರ್ಣಾಮವಾಗಿ ಹೋದರು ಎಂದು ಮಾರ್ಮಿಕವಾಗಿ ನುಡಿದರು.
ಇನ್ನು ಹಲಾಲ್ ಮೂಲಕವೂ ಮತಾಂಧತೆಯನ್ನು ಹೇರವಾಗುತ್ತಿದೆ. ಹಲಾಲ್ ಎಂದರೆ ಏನು ಎಂಬುದನ್ನು ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು. ಕಾಂಗ್ರೆಸ್ ಪಕ್ಷದ ರೀತಿ ಸೋಗಲಾಡಿತನದ ರಾಜಕೀಯವನ್ನು ನಾವು ಮಾಡುವುದಿಲ್ಲ. ಇರುವ ಸತ್ಯವನ್ನು ಒಪ್ಪಿಕೊಂಡು ನೇರವಾಗಿ ಹೇಳುತ್ತೇವೆ. ರಾಜಕೀಯಕ್ಕಾಗಿ ಸೋಗಲಾಡಿತನ ಪ್ರದರ್ಶಿಸುವ ಜಾಯಮಾನ ನಮ್ಮದಲ್ಲ. ನಮ್ಮ ತಾಳ್ಮೆಗೂ ಒಂದು ಮೀತಿ ಇರುತ್ತದೆ. ಅದನ್ನು ಮುಸ್ಲಿಂಮರು ಅರ್ಥ ಮಾಡಿಕೊಳ್ಳಬೇಕು.

ಹಿಂದೂಗಳ ಧಾರ್ಮಿಕ ಕಟ್ಟಡಗಳಲ್ಲಿ ಮುಸ್ಲಿಂಮರಿಗೆ ವ್ಯಾಪಾರ ಮಾಡಲು ನಿರ್ಬಂಧ ವಿಧಿಸಿರುವುದಕ್ಕೆ ವಿರೋಧಿಸುವವರು, ಅಜ್ಮೀರ್ ದರ್ಗಾದ ಸುತ್ತಮುತ್ತ ಎಷ್ಟು ಜನ ಹಿಂದೂಗಳ ವ್ಯಾಪಾರಕ್ಕೆ ಅನುಮತಿ ನೀಡಿದ್ದಾರೆ ಎಂದು ತಿಳಿಸಲಿ ಎಂದು ವಾಗ್ದಾಳಿ ನಡೆಸಿದರು.