ಬೆಂಗಳೂರು: ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾದಿಂದ ಗುಣಮುಖರಾದ ಹಿನ್ನೆಲೆ ಅಪೊಲೋ ಆಸ್ಪತ್ರೆಯಿಂದ ಹೆಚ್.ಡಿ ಕುಮಾರಸ್ವಾಮಿ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ನಿಮ್ಮೆಲ್ಲರ ಪ್ರೀತಿ, ಅಕ್ಕರೆ, ಪ್ರಾರ್ಥನೆಯ ಫಲವಾಗಿ ನಾನು ಇಂದು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿಯ ಕಾಳಜಿಗೆ ನನ್ನ ಪ್ರಣಾಮಗಳು ಎಂದಿದ್ದಾರೆ.
ಇನ್ನೂ ಎರಡು ವಾರಗಳ ಕಾಲ ವೈದ್ಯರ ಸಲಹೆ ಮೇರೆಗೆ ಸಾರ್ವಜನಿಕರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ದಯಮಾಡಿ ಸಹಕರಿಸಿ. ನಿಮ್ಮ ಪ್ರೀತಿಯ ಋಣಭಾರ ನನ್ನ ಮೇಲೆ ಸದಾ ಹೀಗೆ ಇರಲಿ ಎಂದು ಹೇಳಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಏಪ್ರಿಲ್ 17, 2021ರಂದು ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ, ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.