ಮಧ್ಯಪ್ರದೇಶ: ಸರ್ಕಾರಿ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಸಿದ್ದ ಕಾರಣಕ್ಕಾಗಿ ಪೊಲೀಸರು ಹಲ್ಲೆ ನಡೆಸಿದ ಕಾರಣಕ್ಕೆ ದಲಿತ ವರ್ಗಕ್ಕೆ ಸೇರಿದ ದಂಪತಿ ಪೊಲೀಸರು ಹಾಗೂ ತಮ್ಮ ಮಕ್ಕಳ ಎದುರೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ಗುನಾ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ರಾಮ್ಕುಮಾರ್, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಗುನಾ ನಗರದಲ್ಲಿರುವ ಸರ್ಕಾರಿ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಸಿ, ಒಂದಿಷ್ಟು ಬೆಳೆ ಬೆಳೆದಿದ್ದರು. ಆದರೆ ಸದರಿ ಜಾಗದಲ್ಲಿ ಮಾದರಿ ಕಾಲೇಜು ನಿರ್ಮಿಸಲು ಸ್ಥಳೀಯ ಜಿಲ್ಲಾಡಳಿತ ತೀರ್ಮಾನಿಸಿತ್ತು. ಜತೆಗೆ ಸದರಿ ಜಾಗವನ್ನು ಖಾಲಿ ಮಾಡುವಂತೆ ರಾಮ್ಕುಮಾರ್ ದಂಪತಿಗೆ ಸೂಚನೆಯನ್ನು ನೀಡಿದ್ದರೂ, ದಂಪತಿ ಮಾತ್ರ ಜಾಗ ಖಾಲಿ ಮಾಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗುನಾ ನಗರದ ತಹಶೀಲ್ದಾರ್, ಜಾಗದ ಪರಿಶೀಲನೆ ನಡೆಸಿದ ಅಧಿಕಾರಿಗಳು ಒತ್ತುವರಿಯಾಗಿದ್ದ ಜಾಗವನ್ನು ತೆರವು ಮಾಡಿಸುವ ಕೆಲಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರೈತ ದಂಪತಿ ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ ಕಾರಣ, ಪೊಲೀಸರು ದಂಪತಿಯ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
ಈ ವೇಳೆ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಘಟನೆಯಲ್ಲಿ ಅಸ್ವಸ್ಥಗೊಂಡ ದಂಪತಿಯನ್ನು ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೇ ರೈತ ದಂಪತಿ ವಿರುದ್ಧ ದೂರನ್ನು ಸಹ ದಾಖಲಿಸಲಾಗಿದೆ.
ಈ ನಡುವೆ ರೈತ ದಂಪತಿ ಮೇಲೆ ಪೊಲೀಸರು ಮನಬಂದಂತೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಸ್ಥಳೀಯ ವಿರೋಧ ಪಕ್ಷದ ಮುಖಂಡರು ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು. ಈ ಒತ್ತಡಕ್ಕೆ ಮಣಿದ ಸರ್ಕಾರ ಗುನಾ ನಗರದ ಎಸ್ಪಿ ಹಾಗೂ ಜಿಲ್ಲಾ ದಂಡಾಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಿ, ಉನ್ನತಮಟ್ಟದ ತನಿಖೆಗೆ ಆದೇಶಿಸಿದೆ.