ದಾವಣಗೆರೆ ಜಿಲ್ಲೆಯ ಕನಗೊಂಡನಹಳ್ಳಿಯ ಕುಕ್ಕವಾಡದಲ್ಲಿ ಪ್ರಭಾವಿಗಳ ಸಕ್ಕರೆ ಕಾರ್ಖಾನೆಯ ಕಲುಷಿತ ನೀರಿನಿಂದ ಜನ ಜಾನುವಾರುಗಳಿಗೆ ಯಾವ ರೀತಿಯಲ್ಲಿ ತೊಂದರೆಗಳು ಆಗುತ್ತವೆ ನೋಡಿ. ಈ ಫಲವತ್ತಾದ ಕೃಷಿ ಭೂಮಿಯಲ್ಲಿ ಬೆಳೆ ನಳನಳಿಸಬೇಕಿತ್ತು. ರೈತರು ಅದನ್ನು ನೋಡಿ ಖುಷಿ ಖುಷಿಯಾಗಿರಬೇಕಿತ್ತು. ಆದ್ರೆ ದುರಂತ ನೋಡಿ, ಈ ಕೃಷಿ ಭೂಮಿಯಲ್ಲಿ ಕೊಳಕು ನೀರು ತುಂಬಿ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಏನು ಗೊತ್ತಾ? ಪ್ರಭಾವಿಗಳ ಸಕ್ಕರೆ ಕಾರ್ಖಾನೆ.ಜಿಲ್ಲೆಯ ಪ್ರಭಾವಿ ರಾಜಕರಾಣಿ, ಮಾಜಿ ಸಚಿವರಿಗೆ ಸೇರಿರುವ ಸಕ್ಕರೆ ಕಾರ್ಖಾನೆಯಿಂದ ನಿರಂತರವಾಗಿ ಕಲುಷಿತ ನೀರು ಕೆರೆ, ಹೊಲ ಗದ್ದೆಗಳಿಗೆ ಬಿಡುತ್ತಿರುವುದರಿಂದ ಜನ, ಜಾನುವಾರುಗಳಿಗೆ ಅನೇಕ ತೊಂದರೆಗಳಾಗುತ್ತಿವೆ.
ಸಕ್ಕರೆ ಕಾರ್ಖಾನೆಯ ವಿಷಪೂರಿತ ಕಲುಷಿತ ನೀರನ್ನು ಕೆರೆಗೆ ನೇರವಾಗಿ ಬಿಡುತ್ತಿರುವುದರಿಂದ ಕೆರೆ ನೀರು ವಿಷವಾಗಿದೆ. ಕೊಳಕು ವಾಸನೆಯಿಂದ ಹಳ್ಳಿ ಮಂದಿ ನಿತ್ಯ ನರಕಯಾತನೆ ಅನುಭವಿಸಬೇಕಾಗಿದೆ. ಕಾರ್ಖಾನೆಯಲ್ಲಿ ಉತ್ಪತ್ತಿಯಾಗುವ ಕಲುಷಿತ ನೀರು ಹೋಗಲು ಸಮರ್ಪಕವಾಗಿ ಒಂದು ಕಾಲುವೆ ಮಾಡಿ ಬದಲಿ ವ್ಯವಸ್ಥೆಯನ್ನು ಮಾಡಬಹುದಲ್ಲವೇ? ಜನರ ಜೀವದ ಜೊತೆ ಯಾಕೆ ಆಟವಾಡುತ್ತಿದ್ದಾರೆ.
ಈ ಗ್ರಾಮದಲ್ಲಿ ಹರಿಯುವ ಶ್ಯಾಗಲಿ ಕೆರೆ ನೀರು, ಜನರ ಜೀವನಾಡಿಯಾಗಿತ್ತು. ಇಲ್ಲಿನ ಜನ ಈ ಕೆರೆಯ ನೀರನ್ನೇ ನಂಬಿ ಕೃಷಿ ಮಾಡುತ್ತಿದ್ರು. ಜಾನುವರುಗಳು ಇದೇ ನೀರು ಕುಡಿಯುತ್ತಿದ್ದವು. ಆದ್ರೆ ಇಂದು ಈ ಕೆರೆ ಕೊಳಕು ಕೊಂಪೆಯಾಗುತ್ತಿದೆ. ಸಕ್ಕರೆ ಕಾರ್ಖಾನೆಯ ತ್ಯಾಜ್ಯ ನೀರನ್ನು ಕುಡಿಯುವ ನೀರಿನ ಕೆರೆಗೆ ಬಿಡುವುದರಿಂದ ಕನಗೊಂಡನಹಳ್ಳಿ ಮತ್ತು ಕೋಳೆನಹಳ್ಳಿ ಗ್ರಾಮದ ಜನ ಕಂಗಾಲಾಗಿದ್ದಾರೆ.ಅನಿವಾರ್ಯ ಪರಿಸ್ಥಿತಿಯಿಂದಾಗಿ ಇಲ್ಲಿನ ಜನರು ಇದೇ ನೀರನ್ನು ಬಳಸಿಕೊಳ್ಳುತ್ತಿದ್ದು ಇದು ಅನೇಕ ರೋಗಗಳಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಕೆರೆಯ ಜಲಚರಗಳೆಲ್ಲಾ ಸಾವನ್ನಪ್ಪುತ್ತಿವೆ. ಇನ್ನು ಈ ನೀರನ್ನು ಕುಡಿದ ದನ, ನಾಯಿ ಕೂಡ ಸತ್ತಿವೆ.
ಈ ಕೆರೆ ಈ ಊರಿನ ಅನೇಕ ಜನರ ಬದುಕಿಗೆ ಮುಳುವಾಗಿದೆ. ಜನ ನಾನಾ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ಚರ್ಮ ರೋಗ, ಉಸಿರಾಟದ ತೊಂದರೆಯಂಥಾ ಮಾರಕ ಕಾಯಿಲೆಗಳಿಗೆ ತುತ್ತಾಗಿ ಒದ್ದಾಡುತ್ತಿದ್ದಾರೆ. ಕಲುಷಿತ ನೀರಿನ ಕೆಟ್ಟ ವಾಸನೆಯಿಂದ ಗ್ರಾಮದ ಜನರಿಗೆ ಉಸಿರಾಡೋದೇ ಕಷ್ಟಕರವಾಗಿದೆ. ಕುಕ್ಕವಾಡ ಸಕ್ಕರೆ ಕಾರ್ಖಾನೆಯ ಕಲುಷಿತ ನೀರನ್ನು ಯಾವುದೇ ರೀತಿ ಸಂಸ್ಕರಿಸದೆ ನೇರವಾಗಿ ಜನರ ಕೆರೆ, ಹೊಲ ಗದ್ದೆಗಳಿಗೆ ಬಿಟ್ಟು ಕಾನೂನನ್ನು ಉಲ್ಲಂಘಿಸುತ್ತಿದೆ. ಪರಿಸರ ಮಾಲಿನ್ಯ ಮಾಡುತ್ತಿದೆ. ಆದ್ರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾತ್ರ ಕಣ್ಣು ಮೂಗು ಮುಚ್ಚಿ ಕೂತಿದ್ದಾರೆ ಅನ್ನೋದು ಜನರ ದೂರು ಅಧಿಕಾರಿಗಳ ಈ ದಿವ್ಯ ಮೌನಕ್ಕೆ ಮುಖ್ಯ ಕಾರಣ ಇದು ಪ್ರಭಾವಿ ರಾಜಕಾರಣಿ, ಮಾಜಿ ಸಚಿವರಿಗೆ ಸೇರಿರುವ ಸಕ್ಕರೆ ಕಾರ್ಖಾನೆ ಅನ್ನೋ ಕಾರಣಕ್ಕೆ. ಆದ್ರೆ ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಸರ್ಕಾರಿ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಈ ಗ್ರಾಮದ ಜನರ ಸಮಸ್ಯೆ ಪರಿಹರಿಸಬೇಕು.