Stone pelting on Ganesh festival: Davanagere tense
Davanagere: ಗಣೇಶ ಮೂರ್ತಿ ವಿಸರ್ಜನಾ ವೇಳೆ ಕಲ್ಲುತೂರಾಟದಿಂದಾಗಿ ದಾವಣಗೆರೆ (Davanagere) ನಗರದಲ್ಲಿ ಉದ್ವಿಗ್ನತೆ ಉಂಟಾಗಿದೆ. ನಗರಾದಾದ್ಯಂತ ತೀವ್ರ ಭದ್ರತೆ ಕೈಗೊಳ್ಳಲಾಗಿದ್ದು, ಕಲ್ಲು ತೂರಾಟ ನಡೆದ ಇಮಾಂನಗರದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ವಿವಿಧ ಜಿಲ್ಲೆಗಳ ರಿಸರ್ವ್ ಪೊಲೀಸ್ (Reserve Police) ತುಕಡಿಗಳು ಸ್ಥಳದಲ್ಲಿ ಗಸ್ತು ನಡೆಸಿವೆ.
ನಾಗಮಂಗಲದ (Nagamangala) ಬಳಿಕ ದಾವಣಗೆರೆಯಲ್ಲಿ ಉಂಟಾಗಿರುವ ಈ ಘಟನೆಯನ್ನು ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರ ತನ್ನ ಭ್ರಷ್ಟ ಹಗರಣಗಳ ಗಂಭೀರ ಚರ್ಚೆಯ ದಿಕ್ಕು ತಪ್ಪಿಸಿ ಜನರ ಗಮನ ಬೇರೆಡೆ ಸೆಳೆಯಲು ಕೆಲವು ಘಟನೆಗಳನ್ನು ಸೃಷ್ಠಿಮಾಡುತ್ತಿದೆ ಅದರ ಒಂದು ಭಾಗವಾಗಿ ಹಿಂದೂ ಸಮುದಾಯದ ಭಾವನೆ ಕೆರಳಿಸಲು ಗಣೇಶೋತ್ಸವ ಮೆರವಣಿಗೆಗಳ ಮೇಲೆ ದಾಳಿ ನಡೆಸುವ ಮತಾಂಧ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ.
ಈ ಹಿನ್ನಲೆಯಲ್ಲಿ ಗಣೇಶೋತ್ಸವಗಳ ಮೇಲೆ ಕ್ಷುದ್ರ ಶಕ್ತಿಗಳ ಅಟ್ಟಹಾಸ ನಿರಂತರವಾಗಿ ಸಾಗಿದೆ ನಾಗಮಂಗಲದ ಘಟನೆ ಮಾಸುವ ಮುನ್ನವೇ ತಡರಾತ್ರಿ ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ದಾಳಿ ನಡೆದಿರುವ ಘಟನೆ ಗಮನಿಸಿದರೆ ಕಾನೂನು ಸುವ್ಯವಸ್ಥೆಯ ವಿಫಲತೆ ಹಾಗೂ ಗೃಹ ಇಲಾಖೆಯ ಸಂಪೂರ್ಣ ನಿಷ್ಕ್ರಿಯತೆ ಎದ್ದುಕಾಣುತ್ತದೆ, ಹಿಂದೂ ಉತ್ಸವ ಹಾಗೂ ಆಚರಣೆಗಳ ಬಗ್ಗೆ ಕಾಂಗ್ರೆಸ್ (Congress) ಸರ್ಕಾರ ತಾಳಿರುವ ಉಪೇಕ್ಷೆ ಧೋರಣೆಯನ್ನು ಸರಣೀ ಘಟನೆಗಳು ಸಾಕ್ಷಿಕರಿಸುತ್ತಿವೆ ಎಂದಿದ್ದಾರೆ.
ಘಟನೆಯ ವೀಡಿಯೋ ತುಣುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತಾಂಧ ಕಿಡಿಗೇಡಿಗಳು ಕಾಂಗ್ರೆಸ್ ಸರ್ಕಾರ ತಮ್ಮ ರಕ್ಷಣೆಗಿದೆ ಎಂಬ ನಂಬಿಕೆಯಲ್ಲೇ ದಾಳಿ ನಡೆಸುತ್ತಿರುವ ಪರಿ ಗೋಚರವಾಗುತ್ತದೆ. ದಾವಣಗೆರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುರ್ಘಟನೆಗೆ ಕಾರಣರಾದ ಮತಾಂಧರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು.
ಅಲ್ಲದೇ ನಾಗಮಂಗಲದಂತೆ ಅಮಾಯಕ ಹಿಂದೂ ಸಮುದಾಯಕ್ಕೆ ತೊಂದರೆ ನೀಡಿದರೆ ಬಿಜೆಪಿ (BJP) ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ. ಪುಂಡ-ಪೋಕರಿಗಳ, ವಿಧ್ವಂಸಕ ಮನಸ್ಥಿತಿಯ ದೇಶ ದ್ರೋಹಿಗಳ ತಾಣವಾಗುತ್ತಿರುವ ರಾಜ್ಯದಲ್ಲಿ ನಾಗರಿಕ ಸಮಾಜ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲದ ಆತಂಕದ ನೆಲೆ ಸೃಷ್ಠಿಯಾಗುತ್ತಿದೆ. ಸಮಾಜಕ್ಕೆ ಸುರಕ್ಷತೆಯ ವಾತಾವರಣ ನಿರ್ಮಿಸುವ ಬದ್ಧತೆ ಹಾಗೂ ಸಾಮರ್ಥ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದ್ದಂತಿಲ್ಲ, ಈ ಸರ್ಕಾರ ಆಡಳಿತ ಬಿಟ್ಟು ತೊಲಗುವುದೇ ಸದ್ಯಕ್ಕೆ ಕಾಣುತ್ತಿರುವ ಪರಿಹಾರ ಎಂದಿದ್ದಾರೆ.