ಬೆಂಗಳೂರು, ಮಾ. 05: ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್, ಇದೀಗ ಅನ್ನದಾತರ ಬೆನ್ನೆಲುಬಾಗಿ ನಿಲ್ಲಲು ಮುಂದಾಗಿದ್ದು, ಅದರಂತೆ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ರಾಯಭಾರಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಸಮ್ಮುಖದಲ್ಲಿ, ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ನಟ ದರ್ಶನ್, ಅಧಿಕಾರ ಸ್ವೀಕರಿಸಲಿದ್ದಾರೆ. ತಿಂಗಳುಗಳ ಹಿಂದೆ ಮೈಸೂರಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೃಷಿ ಇಲಾಖೆಯ ರಾಯಭಾರಿ ಆಗುವಂತೆ ಕೋರಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ದರ್ಶನ್, ಕೃಷಿ ಇಲಾಖೆಯ ರಾಯಭಾರಿ ಆಗಲು ಒಪ್ಪಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಈಗಾಗಲೇ ಅರಣ್ಯ ಇಲಾಖೆ ರಾಯಭಾರಿಯಾಗಿರುವ ನಟ ದರ್ಶನ್, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತಂತೆ ಅತ್ಯಂತ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಅಲ್ಲದೇ ಅರಣ್ಯ ಇಲಾಖೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚಿಗೆ ವನ್ಯಜೀವಿ ಸಂರಕ್ಷಣೆ ಕುರಿತಂತೆ, “ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ. ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ನಿಮಗೆ ಕಾಳಜಿಯನ್ನು ತೋರಿಸುತ್ತದೆ, ಅಪರಿಚಿತರಾಗಬೇಡಿ! ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗವಾಗಿದೆ! ವನ್ಯಜೀವಿಗಳಿಗಾಗಿ ನಿಲ್ಲುವ ಸಮಯ ಎಂದು ಟ್ವೀಟ್ ಮಾಡಿದ್ದರು.