ಇವರೆಲ್ಲಾ ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರಜೆಗಳು. ಇವರು ಇವತ್ತು ವಿಜಯನಗರದ ಜಿಲ್ಲಾಡಳಿತದ ವೈಫಲ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.
ವಿಜಯನಗರದಲ್ಲಿ ಜಿಲ್ಲಾಡಳಿತ ಸತ್ತೇ ಹೋಗಿದೆಯಾ ಅನ್ನೋ ಪ್ರಶ್ನೆಯನ್ನು ಇಲ್ಲಿನ ಪ್ರಜೆಗಳು ಕೇಳುತ್ತಿದ್ದಾರೆ. ಯಾಕಂದ್ರೆ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮಟ್ಕಾ ದಂಧೆ ವಿಪರೀತವಾಗಿ ಹೆಚ್ಚಿದೆ. ರಸ್ತೆ, ರಸ್ತೆ, ಗಲ್ಲಿ ಗಲ್ಲಿಗಳಲ್ಲಿ ಮದ್ಯ ಮಾರಾಟ ಆಗ್ತಿದೆ. ಸೈಕಲ್, ಟಾಟಾ ಏಸ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದೆ ಅನ್ನೋದು ಸ್ಥಳೀಯರ ದೂರು.
ಅಕ್ರಮ ಮದ್ಯದ ಹಾವಳಿಯಿಂದ ಮನೆಗಳೆಲ್ಲಾ ಮುರಿದು ಬೀಳುತ್ತಿವೆ. ಸಂಸಾರಗಳೆಲ್ಲಾ ಹಾಳಾಗುತ್ತಿವೆ. ನಿತ್ಯ ಜಗಳ ಹಳ್ಳಿ ಹಳ್ಳಿಗಳಲ್ಲಿ ಕಾಮನ್ ಆಗಿದೆ. ಸಣ್ಣ ಸಣ್ಣ ವಯಸ್ಸಿನ ಯುವಕರು ಮದ್ಯಕ್ಕೆ ಬಲಿಯಾಗಿ ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ, ಅನೇಕರು ನಿತ್ಯ ಮದ್ಯ ಕುಡಿದು ನಾನಾ ರೋಗಗಳಿಗೆ ತುತ್ತಾಗಿದ್ದಾರೆ. ಇನ್ನು ಅನೇಕರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
ಇನ್ನು ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಟ್ಕಾ ಜೂಜು ಎಗ್ಗಿಲ್ಲದೇ ನಡೀತಿದೆ. ಜನ ಈ ಅಕ್ರಮ ಆಟಕ್ಕೆ ಸಿಲುಕಿ ಮನೆ,ಮಠ, ಆಸ್ತಿಯನ್ನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ. ದುರಂತ ಅಂದ್ರೆ ಇದು ಹಾಡು ಹಗಲೇ ಪೊಲೀಸ್ ಕಣ್ಣೆದುರಿಗೇ ನಡೆಯುತ್ತಿದೆ. ಆದ್ರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳದೆ ಮೌನ ವಹಿಸಿದ್ದಾರೆ ಎಂದು ಭಾರತ ಜನವಾದಿ ಸಂಘಟನೆ ದೂರಿದೆ.ಈ ಸಂಬಂದಿಸಿದಂತೆ ಪದಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ, ಅವರು ತಹಶಿಲ್ದಾರರಿಗೆ ಒತ್ತಾಯಿಸಿ ಹಕ್ಕೊತ್ತಾಯ ಪತ್ರ ನೀಡಿದ್ದಾರೆ.
ಪೊಲೀಸರು ಕಣ್ಣ ಮುಂದೆ ಅಕ್ರಮ ನಡೆಯುತ್ತಿದ್ರೂ ಯಾಕೆ ಕ್ರಮಕೈಗೊಳ್ಳುತ್ತಿಲ್ಲ. ತಕ್ಷಣ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯ ಮಾಡಿದರು.
ಒಂದು ವೇಳೆ ಜಿಲ್ಲಾಡಳಿತ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕದಿದ್ದರೆ ಹೆಂಗಸರು ಮಕ್ಕಳೆಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಕೂಡ್ಲಿಗಿಯಿಂದ ವಿ.ಜಿ.ವೃಷಭೇಂದ್ರ ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್