“ಡಿಯರ್ ಸತ್ಯ ಚಿತ್ರತಂಡದಲ್ಲಿ ನನಗೆ ಡಿಯರೆಸ್ಟ್ ಆದವರಿದ್ದಾರೆ. ಹಾಗಾಗಿಯೇ ಈ ಸಮಾರಂಭಕ್ಕೆ ಆಗಮಿಸಿ ಆಡಿಯೋ ಸಿಡಿ ಲೋಕಾರ್ಪಣೆ ಮಾಡುತ್ತಿದ್ದೇ. ಚಿತ್ರದಲ್ಲಿ ಸಂತು ನಾಯಕರಾಗಿದ್ದಾರೆ. ಚಿತ್ರದ ನಿರ್ಮಾಪಕರಲ್ಲೊಬ್ಬರಾದ ನನಗೆ ತಮ್ಮನಿದ್ದ ಹಾಗೆ. ಸದ್ಯಕ್ಕೆ ಆಡಿಯೋ ಬಿಡುಗಡೆಯಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಕೂಡ ತೆರೆಕಂಡು ನಾವೆಲ್ಲರೂ ಜೊತೆಯಲ್ಲೇ ನೋಡುವಂತಾಗಲಿ ಎಂದರು” ಎಂದರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅವರು ಡಿಯರ್ ಸತ್ಯ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ಸಂತೋಷ್ ಆರ್ಯನ್ ನಾಯಕರಾಗಿರುವ ಚಿತ್ರ ಡಿಯರ್ ಸತ್ಯ.' ಸಿನಿಮಾವನ್ನು
ಪರ್ಪಲ್ ರಾಕ್ ಎಂಟರ್‌ಪ್ರೈಸಸ್ ಮತ್ತು ವಿಂಟರ್ ಬ್ರಿಡ್ಜ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ವಿಜಯ ರಾಘವೇಂದ್ರ ಅವರನ್ನು ಕೂಡ ಅತಿಥಿಗಳಾಗಿ ಕರೆಸಲಾಗಿತ್ತು. “ಒಂದು ಉತ್ತಮವಾದ ಸ್ನೇಹಿತರ ತಂಡ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ. ಗೆಳೆಯ ಸಂತೋಷ್ ಗೆ ಇದು ಕನಸಿನ ಕೂಸು. ಶಕ್ತಿ ಮೀರಿ ಪರಿಶ್ರಮ ತೋರಿಸಿರುವ ಈ ಸಿನಿಮಾಕ್ಕೆ ಸರೊಯಾದ ಮನ್ನಣೆ ಸಿಗಲಿ” ಎಂದು ವಿಜಯರಾಘವೇಂದ್ರ ಅವರು ಹಾರೈಸಿದರು. ನಾಯಕ ನಟರಾದ ಸಂತೋಷ್ ಆರ್ಯನ್ ಮಾತನಾಡಿ, “ಈ ಹಿಂದೆ ನಾನು `ನೂರು ಜನ್ಮಕೂ’ ಎನ್ನುವ ಚಿತ್ರದಲ್ಲಿ ನಟಿಸಿದ್ದೆ. ಅದರ ಮುಹೂರ್ತಕ್ಕೆ ಪುನೀತ್ ರಾಜ್ ಕುಮಾರ್ ಅವರು ಆಗಮಿಸಿ ಹಾರೈಸಿದ್ದರು. ಇಂದು ಮತ್ತೆ ಪುನೀತ್ ರಾಜ್ ಕುಮಾರ್ ಅವರ ಆಗಮನವಾಗಿದೆ. ಈ ಸಿನಿಮ ನಮ್ಮ ತಂಡದ ಮೂರು ವರ್ಷಗಳ ಕನಸು. ಚಿತ್ರಕ್ಕಾಗಿ ಪಾವನಾ ಜಗದಿಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್, ಅಜಯ್ ರಾವ್, ಯತೀಶ್ ವೆಂಕಟೇಶ್ ಅವರು ಆಧಾರ ಸ್ಥಂಭಗಳಂತೆ ಇದ್ದಾರೆ. ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು ಮುಂದಿನ ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ” ಎಂದರು. ನಾಯಕಿ ಅರ್ಚನಾ ಕೋಟಿಗೆ ಇದು ಮೊದಲ ಚಿತ್ರ. ಒಂದೊಳ್ಳೆಯ ಪಾತ್ರ ದೊರಕಿದ ಖುಷಿ ಅವರ ಮಾತುಗಳಲ್ಲಿತ್ತು.
ಆಡಿಯೋ ಸಿ.ಡಿ ಬಿಡುಗಡೆ ಸಮಾರಂಭದ ನಾಯಕ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಚಿತ್ರದ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ಚಿತ್ರದಲ್ಲಿ ಐದು ಹಾಡುಗಳಿದ್ದು, `ಮುಂದಿನ ನಿಲ್ದಾಣ’ ಸಿನಿಮಾದ ‘ಇನ್ನೂನು ಬೇಕಾಗಿದೇ’ ಗೀತ ರಚನೆಕಾರ ಪ್ರಮೋದ್ ಮರವಂತೆ ಅವರು ಹಾಡುಗಳನ್ನು ಬರೆದಿದ್ದಾರೆ. ಶ್ವೇತಾ, ಅನುರಾಧಾ ಭಟ್, ಅನಿರುದ್ಧ ಶಾಸ್ತ್ರಿ, ಹೇಮಂತ್, ವಿಹಾನ್ ಹಾಡುಗಳಿಗೆ ಧ್ವನಿಯಾಗಿದ್ದಾರೆ ಎಂದರು. ಚಿತ್ರದಲ್ಲಿ ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ ರಾವ್, ಅಪ್ಪಣ್ಣ, ಗುರುರಾಜ್, ಆದರ್ಶ ಚಂದ್ರಶೇಖರ್ ಮೊದಲಾದವರ ತಾರಾಗಣ ಇದೆ. ವಿನೋದ ಭಾರತಿ ಛಾಯಾಗ್ರಹಣ, ಮೋಹನ್ ಮಾಸ್ಟರ್ ಕೊರಿಯಾಗ್ರಫಿ ಸುರೇಶ್ ಆರ್ಮುಗಂ ಸಂಕಲನ ನಿರ್ವಹಿಸಿದ್ದಾರೆ.