ವಿಜಯನಗರ ಅ 5: ಕಲುಷಿತ ನೀರು ಸೇವಿಸಿ 6 ಮಂದಿ ಸಾವನ್ನಪ್ಪಿರುವ ಘಟನೆ ಬೆನ್ನಲ್ಲೆ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಗ್ರಾಮಸ್ಥರು ಊರು ತೊರೆದು ಹೋಗುತ್ತಿರುವ ಘಟನೆ ನೂತನ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ನಡೆದಿದೆ.
ಕಲುಷಿತ ನೀರು ಸೇವನೆಯಿಂದ ವಾಂತಿಭೇದಿಯಿಂದ ಈಗಾಗಲೇ 6 ಜನರು ಮೃತಪಟ್ಟಿದ್ದು, ಅನೇಕ ಮಂದಿ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಆತಂಕದ ಜನರು ಗ್ರಾಮವನ್ನು ತೊರೆದು ಸಂಬಂಧಿಕರ ಮನೆಗೆ ತೆರಳಿದ್ದು, ಶಾಲೆಗೆ ತಾತ್ಕಾಲಿಕವಾಗಿ ರಜೆ ಘೋಷಣೆ ಮಾಡಲಾಗಿದೆ.
ಇನ್ನು ಮಕರಬ್ಬಿ ಗ್ರಾಮದಲ್ಲಿ ಬೋರ್ ವೇಲ್ನಿಂದ ಹೊಸ ಪೈಪ್ ಲೈನ್ ಕಾಮಗಾರಿ ಅಳವಡಿಕೆ ನಡೆಯುತ್ತಿದ್ದ ವೇಳೆ ಹಳೆ ಪೈಪ್ ಗಳಿಗೆ ಡ್ಯಾಮೇಜ್ ಆಗಿ ಪೈಪ್ ನೊಳಗೆ ಚರಂಡಿ ನೀರು ಮಿಶ್ರವಾಗಿದ್ದು, ಇದೇ ನೀರನ್ನು ಕುಡಿದ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದು, 6 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಲುಷಿತ ನೀರಿನಿಂದ ಪ್ರಾಣ ಉಳಿಸಿಕೊಳ್ಳಲು 20 ವರ್ಷದೊಳಗಿನವರು ಊರಲ್ಲಿಲ್ಲ. ಅಕ್ಕ, ಪಕ್ಕದ ಸಂಬಂಧಿಕರ ಊರುಗಳಿಗೆ ತೆರಳಿದ್ದಾರೆ. ಜೀವ ಉಳಿದರೆ ಸಾಕು ಎಂದು ಊರು ಬಿಡುತ್ತಿದ್ದಾರೆ. ಇಷ್ಟೆಲ್ಲಾ ಅನಾಹುತ ಸಂಭವಿಸಿದರೂ ಸರ್ಕಾರಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಿರುವುದಕ್ಕೆ ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.