ಚಾಮರಾಜನಗರ, ಮಾ. 29: ಹಸಿವಿನಿಂದ ಎರಡು ಹುಲಿ ಮರಿಗಳು ಮೃತಪಟ್ಟಿರುವ ಘಟನೆ ಬಂಡಿಪುರ ಅಭಯಾರಣ್ಯದಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಯಡಿಯಾಲ ಉಪವಿಭಾಗದ ವನ್ಯಜೀವಿ ವಲಯದಲ್ಲಿ ತಾಯಿ ಜತೆ ಇಲ್ಲದ ನಿತ್ರಾಣಗೊಂಡಿದ್ದ ಮೂರು ಹುಲಿ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಪತ್ತೆ ಹಚ್ಚಿದ್ದರು.
ಅದರಲ್ಲಿ ಒಂದು ಹೆಣ್ಣು ಹುಲಿ ಮರಿ ಸ್ಥಳದಲ್ಲೇ ಮೃತಪಟ್ಟಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಉಳಿದ ಎರಡು ಹುಲಿ ಮರಿಗಳನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ರವಾನಿಸಿದ್ದು ಅಲ್ಲಿ ಹೆಣ್ಣು ಹುಲಿ ಮರಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ. ಉಳಿದಿರುವ ಒಂದು ಗಂಡು ಹುಲಿ ಮರಿಯ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.
ತಾಯಿ ಹುಲಿ ಮರಿಗಳೊಂದಿಗೆ ಸಾಮಾನ್ಯವಾಗಿ ಎರಡರಿಂದ ಮೂರು ವರ್ಷ ಜತೆ ಇರುತ್ತವೆ. ಎಲ್ಲೇ ಹೋದರು ತನ್ನ ಮರಿಗಳನ್ನು ಸಂರಕ್ಷಣೆ ಮಾಡುತ್ತ ಆಹಾರ ಹುಡುಕುವುದು, ಬೇಟೆಯಾಡುವುದು, ಬೇರೆ ಹುಲಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳುವ ಕಲೆಯನ್ನು ಕಲಿಸುತ್ತದೆ. ಆದರೆ ಯಡಿಯಾಲ ವಲಯದಲ್ಲಿ ಸಿಕ್ಕಿರುವ ಹುಲಿ ಮರಿಗಳು ತಾಯಿಯಿಂದ ಹೇಗೆ ಬೇರ್ಪಟ್ಟಿವೆ ಎನ್ನುವುದು ಇನ್ನು ತಿಳಿದುಬಂದಿಲ್ಲ.
ಹುಲಿ ಮರಿಗಳು ಸಿಕ್ಕ ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕ ನಟೇಶ್ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭಾರತೀಯ ಹುಲಿ ಸಂರಕ್ಷಿತ ಅರಣ್ಯ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ನಿರ್ಧಾರದ ಪ್ರಕಾರ ಮೃತಪಟ್ಟ ಒಂದು ಹೆಣ್ಣುಹುಲಿ ಮರಿಯ ಶವಪರೀಕ್ಷೆಯನ್ನು ಸಮಿತಿಯ ಸದಸ್ಯರು ಮುಂದೆ ಶವ ಪರೀಕ್ಷೆ ನಡೆಸಲಾಗಿದ್ದು, ತಾಯಿ ಹುಲಿ ಪತ್ತೆಗಾಗಿ ಅರಣ್ಯಾಧಿಕಾರಿಗಳು ಕೋಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.