Bengaluru: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರಿಂ ಕೋರ್ಟ್ಗೆ (Supreme Court) ಮೇಲನವಿ ಅರ್ಜಿ ಸಲ್ಲಿಕೆ ಮಾಡುವುದಾಗಿ ಹೇಳಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ (Snehamayi Krishna) ಅವರು ಇದೀಗ ಅರ್ಜಿ ಸಲ್ಲಿಕೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ. ತಮ್ಮ ಮುಂದಿನ ನಿರ್ಧಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ (Social media) ಪೋಸ್ಟ್ ಮಾಡಿದ್ದು, ಮುಡಾ ಪ್ರಕರಣವನ್ನು (Muda case) ಸಿಬಿಐಗೆ ವಹಿಸಲು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ (Supreme Court) ಮೇಲನವಿ ಸಲ್ಲಿಸುವ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯವು (High Court) ನನ್ನ ಅರ್ಜಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಅಂಶಗಳನ್ನು ಓದಿದ ನಂತರ ಎರಡು ದಿನಗಳ ಕಾಲ ಚಿಂತನೆ ನಡೆಸಿ ನನ್ನ ಬಳಿ ಇರುವ ಸಾಕ್ಷ್ಯಾಧಾರಗಳನ್ನು (Evidence) ಮತ್ತೊಮೆ ಪರಿಶೀಲನೆ ನಡೆಸಿ ನನ್ನ ಕೆಲವು ಆತ್ಮೀಯ ವಕೀಲರೊಂದಿಗೆ ಹಿತೈಷಿಗಳೊಂದಿಗೆ ಚರ್ಚೆ ನಡೆಸಿ ನನ್ನ ಇದುವರೆಗಿನ ಕಾನೂನು ಹೋರಾಟದ ಅನುಭವವನ್ನು ಆಧರಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಮುಡಾ ಪ್ರಕರಣವನ್ನು (Muda case) ಸಿಬಿಐಗೆ ವಹಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಮತ್ತಷ್ಟು ಕಾಲ ವಿಳಂಬ ಮಾಡುವ ಬದಲು, ಲೋಕಾಯುಕ್ತ ಅಧಿಕಾರಿಗಳು (Lokayukta officials) ಏನೇ ವರದಿ ಸಲ್ಲಿಸಿದರೂ ಸಹ ನನ್ನ ಬಳಿ ಇರುವ ಮತ್ತು ಲಭ್ಯವಾಗುವ ಸಾಕ್ಷ್ಯಾಧಾರಗಳನ್ನು ಆಧರಿಸಿ ನ್ಯಾಯಾಲಯದಲ್ಲಿ ನಾನು ಮಾಡಿರುವ ಆರೋಪದಿಂದ ಆರೋಪಿತರಿಗೆ ಶಿಕ್ಷೆ ಕೊಡಿಸಬಹುದು ಎಂಬ ವಿಶ್ವಾಸ ಮೂಡಿದ್ದರಿಂದ ವಕೀಲರ ಪರೋಕ್ಷ ಸಹಕಾರ ಪಡೆದುಕೊಂಡು, ಅವಶ್ಯಕತೆ ಬಿದ್ದರೆ ವಕೀಲರನ್ನು ನೇಮಕ ಮಾಡಿಕೊಳ್ಳುವ ಹಕ್ಕನ್ನು ಉಳಿಸಿಕೊಂಡು ಖುದ್ದಾಗಿ ನಾನೇ ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿ ವಾದ ಮಂಡನೆ ಮಾಡಿ, ಆರೋಪವನ್ನು ಸಾಬೀತು ಪಡಿಸಿ, ಆದಷ್ಟು ಬೇಗ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತ ಪೂರ್ಣ ತನಿಖಾ ವರದಿ ಸಲ್ಲಿಸಿದ ನಂತರ ಮೇಲನವಿ ಸಲ್ಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ಮೇಲನವಿ ಸಲ್ಲಿಸಿ ಸಮಯ ವ್ಯರ್ಥ ಮಾಡುವ ಬದಲು ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಕಡೆ ಹೆಚ್ಚಿನ ಗಮನ ನೀಡುತ್ತೇನೆ. ಸಿಎಂ ತಪ್ಪು ಮಾಡಿದರೆ ಒಬ್ಬ ಸಾಮಾನ್ಯ ಪ್ರಜೆ ಶಿಕ್ಷೆ ಕೊಡಿಸಬಹುದು ಎಂಬುದನ್ನು ಸಾಬೀತುಪಡಿಸುತ್ತೇನೆ. ನನ್ನ ಬಳಿ ಇರುವ ದಾಖಲೆ-ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ನೀಡುತ್ತೇನೆ ಎಂದು ಹೇಳಿದರು.ಸಿಎಂ ಪರ ಘಟಾನುಘಟಿ ವಕೀಲರು ಬರುತ್ತಾರೆ, ವಾದ ಮಂಡಿಸುತ್ತಾರೆ. ಅವರ ಮುಂದೆ ನಾನು ವಾದ ಮಂಡನೆ ಮಾಡಬೇಕು. ಸಿಬಿಐಗೆ (CBI) ವಹಿಸಿ ಅಂತ ಹೋರಾಟ ಮಾಡುವ ಬದಲು ಶಿಕ್ಷೆ ಕೊಡಿಸಲು ಹೋರಾಟ ಮಾಡುತ್ತೇನೆ. ನಾನು ಯಾವುದೇ ನಿರ್ಧಾರ ಮಾಡಿದರೂ ಪರ-ವಿರೋಧ ಚರ್ಚೆಯಾಗುತ್ತದೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ, ನನ್ನ ಗುರಿ ಮುಟ್ಟುತ್ತೇನೆ ಎಂದು ಹೇಳಿದ್ದಾರೆ.