ಮುಂಬೈ, ಜೂ. 05: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಮಹಾರಾಷ್ಟ್ರದಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಐದು ಹಂತಗಳಲ್ಲಿ ತೆರವುಗೊಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದೆ. ಶುಕ್ರವಾರ ರಾತ್ರಿ ಈ ಐದು ಹಂತಗಳ ಲಾಕ್ಡೌನ್ ತೆರವುಗೊಳಿಸುವ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಜೂನ್ 3ರವರೆಗಿನ ಪಾಸಿಟಿವಿಟಿ ರೇಟ್ ಮತ್ತು ಆಮ್ಲಜನಕಸಹಿತ ಹಾಸಿಗೆಗಳ ಬಳಕೆ ಪ್ರಮಾಣದ ಆಧಾರದ ಮೇಲೆ, ಸೋಮವಾರದಿಂದ (ಇದೇ 7) ಈ ನಿರ್ಬಂಧಗಳ ಸಡಿಲಿಕೆಯ ಆದೇಶ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.
ಮೊದಲ ಹಂತದಲ್ಲಿ, ಶೇ 5ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ ಹಾಗೂ ಶೇ 25ಕ್ಕಿಂತ ಕಡಿಮೆ ಆಮ್ಲಜನಕ ಸಹಿತ ಹಾಸಿಗೆಗಳ ಆಕ್ಯುಪೆನ್ಸಿ ಇರುವ ನಗರ ಮತ್ತು ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನಿರ್ಬಂಧವನ್ನು ಸಡಿಲಗೊಳಿಸಲಾಗುತ್ತದೆ. ಎಲ್ಲ ಅಂಗಡಿಗಳು, ಮಾಲ್ಗಳು, ಚಿತ್ರಮಂದಿರಗಳು, ಕ್ರೀಡಾಂಗಣ, ರೆಸ್ಟೊರೆಂಟ್, ಖಾಸಗಿ ಕಚೇರಿಗಳು, ಕ್ರೀಡಾ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ಸಿನಿಮಾ ಚಿತ್ರೀಕರಣ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುತ್ತದೆ. ಕೃಷಿ, ಉತ್ಪಾದನಾ ಕ್ಷೇತ್ರ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ.
ಎರಡನೆಯ ಹಂತದಲ್ಲಿ, ಪಾಸಿಟಿವಿಟಿ ರೇಟ್ ಶೇ 5 ಮತ್ತು ಆಮ್ಲಜನಕದ ಹಾಸಿಗೆ ಹೊಂದಿರುವ ಪ್ರಮಾಣ ಶೇ 25 –ಶೇ 40ರ ನಡುವಿರುವ ನಗರಗಳು ಮತ್ತು ಜಿಲ್ಲೆಗಳಲ್ಲಿ, ಎಲ್ಲ ರೀತಿಯ ಅಂಗಡಿಗಳನ್ನು ನಿಯಮಿತ ಸಮಯದ ಪ್ರಕಾರ ತೆರೆಯಲು ಅನುಮತಿ ನೀಡಲಾಗುತ್ತದೆ. ಆದರೆ ಮಾಲ್ಗಳು, ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳು, ಸಭಾಂಗಣಗಳು ಮತ್ತು ರೆಸ್ಟೊರೆಂಟ್ಗಳಲ್ಲಿ ಶೇ 50ರಷ್ಟು ಜನರಿಗೆ ಪ್ರವೇಶ ಕಲ್ಪಿಸುವ ನಿರ್ಬಂಧ ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಸ್ಥಳೀಯ ರೈಲುಗಳಲ್ಲಿ ನಿರ್ಬಂಧಿತ ಸಂಚಾರಕ್ಕೆ ಅವಕಾಶ. ವೈದ್ಯಕೀಯ ಮತ್ತು ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಪೂರ್ಣ ಪ್ರಮಾಣದ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ.
ಸಾರ್ವಜನಿಕ ಸ್ಥಳಗಳು ಮತ್ತು ಖಾಸಗಿ ಕಚೇರಿಗಳನ್ನು ತೆರೆಯಬಹುದು. ಸಾಮಾಜಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಶೇ 50ರಷ್ಟು ಜನರಿಗೆ ಅವಕಾಶ ನೀಡಲಾಗುವುದು. ಈ ಹಂತದಲ್ಲಿ ‘ಕರ್ಫ್ಯೂ’ ಮಾದರಿಯ ಆದೇಶಗಳು ಜಾರಿಯಲ್ಲಿರುತ್ತವೆ. ಶೇಕಡಾ 50 ಗ್ರಾಹಕರೊಂದಿಗೆ, ಜಿಮ್ಗಳು, ಸಲೊನ್ಸ್, ಪಾರ್ಲರ್ಗಳನ್ನು ತೆರೆಯಬಹುದಾಗಿದೆ. ಉಳಿದ ಮೂರು ಹಂತಗಳಲ್ಲಿ ಕೆಲ ನಿರ್ಬಂಧಗಳೊಂದಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.