ನವದೆಹಲಿ, ಫೆ. 09: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಜನವರಿ 26 ಗಣರಾಜೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಕೆಂಪುಕೋಟೆಯ ಮೇಲೆ ಸಿಖ್ ಧ್ವಜ ಹಾರಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಪಂಜಾಬಿ ನಟ, ಬಿಜೆಪಿ ಬೆಂಬಲಿಗ ದೀಪ್ ಸಿಧು ನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ ಪೊಲೀಸರು ಸಿಧು ಬಂಧನದ ಕುರಿತು ವಿಸ್ತೃತ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ.
ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿಂದಂತೆ ದೆಹಲಿ ಪೊಲೀಸರು ದೀಪ್ ಸಿಧು ಮತ್ತು ಲಕ್ಕಾ ಸದನಾ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಜೊತೆಗೆ ಬಂಧನಕ್ಕೆ ಕಾರಣವಾದ ಮಾಹಿತಿಯನ್ನು ನೀಡಿದವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಈ ಹಿಂದೆ ದೆಹಲಿ ಪೊಲೀಸರು ಘೋಷಿಸಿದ್ದರು.
ದೀಪ್ ಸಿಧು, ಕ್ಯಾಲಿಪೋರ್ನಿಯಾದಲ್ಲಿ ನೆಲೆನಿಂತ ಮಹಿಳಾ ಸ್ನೇಹಿತೆಯ ಜೊತೆಗೆ ಸಂಪರ್ಕದಲ್ಲಿದ್ದರು. ಆತ ಮಾಡುತ್ತಿದ್ದ ವಿಡಿಯೋಗಳನ್ನು ಅವಳಿಗೆ ಕಳಿಸುತ್ತಿದ್ದ, ಆಕೆ ಕೆಲವೊಂದು ವಿಡಿಯೋಗಳನ್ನು ಫೇಸ್‌ಬುಕ್‌ಗೆ ಅಪ್ಲೋಡ್ ಮಾಡುತ್ತಿದ್ದಳು, ಇದು ಪೊಲೀಸರಿಗೆ ಪತ್ತೆ ಹಚ್ಚಲು ಸಹಕಾರಿಯಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ
ಜನವರಿ 26 ರಂದು ರೈತರ ಟ್ರ್ಯಾಕ್ಟರ್ ಮೆರವಣಿಗೆಯ ಸಂದರ್ಭದಲ್ಲಿ ನಿಯಮವನ್ನು ಉಲ್ಲಂಘಿಸಿ ಕೆಲವರು ಕೆಂಪೊಕೋಟೆಯಲ್ಲಿ ಧಾರ್ಮಿಕ ಧ್ವಜ ಹಾರಿಸಿದ್ದರು, ಅದರಲ್ಲಿ ಪಂಜಾಬಿ ನಟ ದೀಪ್ ಸಿಧು ಪ್ರಧಾನ ಆರೋಪಿ ಎಂದು ಅಪರಾಧ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಪ್ರವೀರ್ ರಂಜನ್ ಹೇಳಿದ್ದಾರೆ.