ನವದೆಹಲಿ, ಮೇ. 10: ಕೋವಿಡ್ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಲಾಕ್‌ಡೌನ್ ಅನ್ನು ಮೇ 17 ರಂದು ಬೆಳಿಗ್ಗೆ 5 ಗಂಟೆಯವರೆಗೆ ವಿಸ್ತರಿಸಿದ್ದಾರೆ. “ಲಾಕ್‌ಡೌನ್ ಕಾರಣದಿಂದಾಗಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದೇ ಕಾರಣಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್‌ಡೌನ್ ಅನ್ನು ಮತ್ತೊಂದು ವಾರಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ” ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಅಲ್ಲದೆ, “ಲಾಕ್‌ಡೌನ್ ಅವಧಿಯನ್ನು ಬಳಸಿಕೊಂಡು ರಾಜ್ಯದಲ್ಲಿ ಮತ್ತಷ್ಟು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕ್ರಮ ವಹಿಸಲಾಗುವುದು. ಆಮ್ಲಜನಕದ ಕೊರತೆ ಸಮಸ್ಯೆ ಕೇಂದ್ರದ ಸಹಾಯದಿಂದ ಈಗ ಪರಿಸ್ಥಿತಿ ಉತ್ತಮವಾಗಿದೆ”ಎಂದು ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಏಪ್ರಿಲ್ ಮಧ್ಯದಲ್ಲಿ ಶೇ.35 ರಷ್ಟಿದ್ದ ಕೋವಿಡ್ ಸಂಖ್ಯೆಯ ಪ್ರಮಾಣವು ಇದೀಗ ಶೇ.23ಕ್ಕೆ ಇಳಿದಿದೆ. ಈ ವಿಸ್ತರಣೆಯೊಂದಿಗೆ, ಕೋವಿಡ್ ಬಿಕ್ಕಟ್ಟಿನ ಮಧ್ಯೆ ದೆಹಲಿ ತನ್ನ ನಾಲ್ಕನೇ ವಾರದ ಲಾಕ್‌ಡೌನ್ ಪ್ರವೇಶಿಸಲಿದೆ.
ಇದಕ್ಕೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯಲ್ಲಿನ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ, ಕೇಜ್ರಿವಾಲ್ ಅವರು ಆಮ್ಲಜನಕದ ಲಭ್ಯತೆಗೆ ಸಂಬಂಧಿಸಿದಂತೆ ದೆಹಲಿಯ ಅನಿಶ್ಚಿತ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಮತ್ತು ಆದ್ದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಬೇಕು ಎಂದು ಸೂಚಿಸಿದರು. ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಜೀವವನ್ನು ಕಳೆದುಕೊಳ್ಳಬಾರದು ಮತ್ತು ರಾಜಧಾನಿಯೊಳಗಿನ ವಿತರಣಾ ಅಡಚಣೆಗಳಿಂದಾಗಿ ಯಾರಿಗೂ ಸಮಸ್ಯೆಯಾಗಬಾರದು ಎಂದು ಅರವಿಂದ ಕೇಜ್ರಿವಾಲ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.