ನವದೆಹಲಿ, ಮಾ. 12: ಕೊರೊನಾ ಸಾಂಕ್ರಾಮಿಕದಿಂದ ಜಗತ್ತಿನ ಜೀವನಶೈಲಿಯೇ ಬದಲಾಗಿದೆ. ಮಕ್ಕಳ ಶಿಕ್ಷಣವಂತೂ ಹಗ್ಗ ಕಳೆದುಕೊಂಡ ಗಾಳಿಪಟದಂತಾಗಿದೆ. ಆನ್‌ಲೈನ್ ಕ್ಲಾಸ್‌ಗಳು ನಡೆಯುತ್ತಿದ್ರೂ ಸರಿಯಾಗಿ ಅದರ ಉಪಯೋಗವಾಗುತ್ತಿಲ್ಲ. ಬಡವರ ಮಕ್ಕಳು, ಕೊಳೆಗೇರಿ ನಿವಾಸಿಗಳ ಮಕ್ಕಳಿಗಂತೂ ಶಾಲೆಯೂ ಇಲ್ಲದೆ, ಆನ್‌ಲೈನ್ ಕ್ಲಾಸ್‌ನಲ್ಲೂ ಕೇಳಲು ಆಗದೆ ತೊಂದರೆಗೊಳಗಾಗಿದ್ದಾರೆ. ಹಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದಲೇ ಬಿಡಿಸಿದ್ದಾರೆ. ಇದರಿಂದ ಕೆಲ ಮಕ್ಕಳು ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರು ಬಾಲ್ಯ ವಿವಾಹ, ಹಾದಿ ತಪ್ಪುವ ಭೀತಿ ಎದುರಾಗಿದೆ. ಆದರೆ, ರಾಷ್ಟ್ರ ರಾಜಧಾನಿಯಲ್ಲಿರುವ ಕೊಳೆಗೇರಿ ಮಕ್ಕಳಿಗೆ ಕಲಿಯಲು ಪೊಲೀಸ್ ಠಾಣೆಯೇ ಸಹಾಯ ಮಾಡುತ್ತಿದೆ.
ದೆಹಲಿ ಪೊಲೀಸರು ಪೋಲೀಸ್ ಸ್ಟೇಷನ್ ಅನ್ನು ಸಾರ್ವಜನಿಕ ಗ್ರಂಥಾಲಯವಾಗಿ ಪರಿವರ್ತಿಸಿ, ಆರ್.ಕೆ. ಪುರಂ ಪೊಲೀಸ್ ಠಾಣೆಯ ಹತ್ತಿರದ ಪ್ರದೇಶಗಳಲ್ಲಿನ ಕೊಳೆಗೇರಿ ಮಕ್ಕಳಿಗೆ ಅಪರಾಧದ ಹಾದಿಗೆ ದಾರಿ ತಪ್ಪುವ ಬದಲು ಓದಲು ಮತ್ತು ಬರೆಯಲು ಅವಕಾಶ ಕಲ್ಪಿಸಿಕೊಡುತ್ತಿದೆ. ಈ ಸಾರ್ವಜನಿಕ ಗ್ರಂಥಾಲಯವು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದಿಂದ ಬರುವ ಮಕ್ಕಳಿಗೆ ಜಾಗವನ್ನು ಒದಗಿಸುತ್ತದೆ. ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜೇಶ್ ಶರ್ಮಾ ಈ ಸ್ಥಳವನ್ನು ಮಾರ್ಪಡಿಸಿ ಬೀದಿ ಮಕ್ಕಳಿಗೆ ನಿಯತಕಾಲಿಕೆಗಳು, ಪತ್ರಿಕೆಗಳು, ಪುಸ್ತಕಗಳು ಸಿಗುವಂತೆ ಮಾಡಲು ಸಹಾಯ ಮಾಡುತ್ತಿದ್ದಾರೆ.
“ಶಿಕ್ಷಣ ಮತ್ತು ಸುರಕ್ಷಿತ ಸ್ಥಳದ ಅನುಪಸ್ಥಿತಿಯಲ್ಲಿ, ಮಕ್ಕಳು ಅಪರಾಧಗಳು ಮತ್ತು ಮಾದಕ ದ್ರವ್ಯಗಳಲ್ಲಿ ಭಾಗಿಯಾಗುತ್ತಾರೆ. ಪೊಲೀಸರಾಗಿ, ಯುವಕರು ತಪ್ಪು ಹಾದಿಯಲ್ಲಿ ಇಳಿಯದಂತೆ ನೋಡಿಕೊಳ್ಳುವುದು ನಮ್ಮ ಪ್ರಾಥಮಿಕ ಕೆಲಸ” ಎಂದು ಶರ್ಮಾ ಹೇಳಿದ್ದಾರೆಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಈ ಸ್ಥಳ ಪ್ರಾರಂಭವಾದಾಗಿನಿಂದ, 70 ಕ್ಕೂ ಹೆಚ್ಚು ಮಕ್ಕಳು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಗ್ರಂಥಾಲಯವು ಸ್ಮಾರ್ಟ್ ಕ್ಲಾಸ್ ರೂಂ, ಕಂಪ್ಯೂಟರ್‌ಗಳು ಮತ್ತು ಇಂಟರ್ನೆಟ್ ಸಂಪರ್ಕವನ್ನು ಸಹ ಹೊಂದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೌನ್ಸೆಲಿಂಗ್ ಮತ್ತು ಉಚಿತ ತರಬೇತಿಯನ್ನು ಒದಗಿಸುವ ಎನ್‌ಜಿಒ ಜೊತೆ ಗ್ರಂಥಾಲಯವು ಸಹಭಾಗಿತ್ವವನ್ನು ಹೊಂದಿದೆ.ಈ ಗ್ರಂಥಾಲಯವು ಸುಮಾರು 2,300 ಪುಸ್ತಕಗಳನ್ನು ಹೊಂದಿದ್ದು, ಈ ಪೈಕಿ 1,900 ಕ್ಕೂ ಹೆಚ್ಚು ನಿಯತಕಾಲಿಕೆಗಳು ಮತ್ತು 15 ಪತ್ರಿಕೆಗಳು ಇವೆ. ಇದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಈ ಸ್ಥಳವು ಒಂದು ಸಮಯದಲ್ಲಿ ಸುಮಾರು 100 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ.