Dell laid off 12500 employees Kannada tech news
New Delhi : ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದಲ್ಲಿ ತಲ್ಲಣ ಮುಂದುವರಿದಿದ್ದು, ಜುಲೈ ತಿಂಗಳಿನಲ್ಲಿ 34 ಕಂಪನಿಗಳ ಸುಮಾರು 8 ಸಾವಿರ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕಳೆದ ಜನವರಿಯಿಂದ ಉದ್ಯೋಗ ಕಳೆದುಕೊಂಡ ಟೆಕಿಗಳ ಸಂಖ್ಯೆ 1.24 ಲಕ್ಷಕ್ಕೆ ಏರಿಕೆಯಾಗಿದೆ. ಈ ನೌಕರರು ವಿಶ್ವಾದ್ಯಂತ ಇರುವ 384 ವಿವಿಧ ಕಂಪನಿಗಳಿಗೆ ಸೇರಿದವರಾಗಿದ್ದಾರೆ.
ಡೆಲ್ ಟೆಕ್ನಾಲಜೀಸ್ (Dell Technologies) ಕಳೆದ 15 ತಿಂಗಳುಗಳಲ್ಲಿ ಎರಡನೇ ಹಂತ ವಜಾ ಪ್ರಕ್ರಿಯೆಯನ್ನು ಘೋಷಣೆ ಮಾಡಿದ್ದು ಕಂಪನಿಯು ಸುಮಾರು 12,500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಇದು ಡೆಲ್‌ನ ಉದ್ಯೋಗಿಗಳ ಶೇ. 10ರಷ್ಟು ಎಂದು ಹೇಳಲಾಗಿದೆ. ಆಧುನಿಕ ಐಟಿ ಪರಿಹಾರಗಳು ಹಾಗೂ ಎಐ ಮೇಲೆ ಹೆಚ್ಚಿನ ಗಮನ ನೀಡುವ ಉದ್ದೇಶದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ .
ಅದರೊಂದಿಗೆ ಕಂಪನಿಯ ಕಾರ್ಯಾಚರಣೆಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ಭವಿಷ್ಯದ ಬೆಳವಣಿಗೆಯನ್ನು ಹೆಚ್ಚಿಸುವ ಪ್ರದೇಶಗಳಲ್ಲಿ ಹೂಡಿಕೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಇದು ಅನಿವಾರ್ಯವಾಗಿದೆ. ತನ್ನ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಮತ್ತೊಂದು ಸುತ್ತಿನ ವಜಾಗೊಳಿಸುವಿಕೆಯನ್ನು ಮುಂದುವರೆಸಿದೆ.
ಇದೀಗ ಸುಮಾರು 12,500 ಉದ್ಯೋಗಿಗಳನ್ನು ಕೈಬಿಡಲಾಗಿದೆ. ಇದು ಕಂಪನಿಯ ಶೇಕಡಾ ಹತ್ತರಷ್ಟು ಉದ್ಯೋಗಿಗಳನ್ನು ಪ್ರತಿನಿಧಿಸುತ್ತದೆ, ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಮತ್ತು ವ್ಯವಹಾರವನ್ನು ಮರುಹೊಂದಿಸುವ ಪ್ರಯತ್ನದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಈಗಾಗಲೇ ವಜಾ ಆಗಿರುವ ಉದ್ಯೋಗಿಗಳಿಗೆ ಎರಡು ತಿಂಗಳ ವೇತನ ಮತ್ತು ಪ್ರತಿ ವರ್ಷಕ್ಕೆ ಹೆಚ್ಚುವರಿ ವಾರ, ಗರಿಷ್ಠ 26 ವಾರಗಳವರೆಗೆ ಬೇರ್ಪಡಿಕೆ ಪ್ಯಾಕೇಜ್‌ಗಳನ್ನು ನೀಡಲಾಗುತ್ತಿದೆ ಎಂದು ಡೆಲ್ ಕಂಪನಿ (Dell Company) ಹೇಳಿಕೊಂಡಿದೆ.
ಇನ್ನು ಇಂಟೆಲ್ ಕಂಪನಿ 1500, ಮೈಕ್ರೋಸಾಫ್ಟ್ (Microsoft) 1000, ಅಮೆರಿಕ ಮೂಲದ ಯುಕೆಜಿ ಕಂಪನಿ 2200, ಅಮೆರಿಕದ ಇನ್‌ಟ್ಯೂಟ್ 1800, ಬ್ರಿಟನ್‌ನ ಡೈಸನ್ 1000, ಬೆಂಗಳೂರು ಮೂಲದ ರೇಶಾಮಂಡಿ ತನ್ನ ಶೇ.80, ಪಾಕೆಟ್‌ಎಫ್‌ಎಂ 200, ಅನ್‌ಅಕಾಡೆಮಿ 250, ಚೆನ್ನೈನ ವೇ ಕೂಲ್ 200, ಬಂಗೀ ಕಂಪನಿ 220 ನೌಕರರನ್ನು ತೆಗೆದು ಹಾಕಿವೆ. ಇನ್ನಷ್ಟು ಕಂಪನಿಗಳು ವೆಚ್ಚ ಕಡಿತ ಉದ್ದೇಶದಿಂದ ಮುಂಬರುವ ತಿಂಗಳುಗಳಲ್ಲಿ ಸ್ವಯಂ ನಿವೃತ್ತಿ ಸೌಲಭ್ಯ ಕೊಡುವ ಚಿಂತನೆಯಲ್ಲಿವೆ ಎಂದು ಹೇಳಲಾಗುತ್ತಿದೆ.