- ಆರೋಗ್ಯ ಇಲಾಖೆಯ ಕಠಿಣ ಕ್ರಮಗಳಿಂದಾಗಿ (Dengue cases decrease in Karnataka) ಡೆಂಗ್ಯೂ ಪ್ರಕರಣ ಇಳಿಕೆ
- ಆರಂಭಿಕ ಪತ್ತೆ, ಕಣ್ಗಾವಲು ಮತ್ತು ಜಾಗೃತಿಯಿಂದ ಡೆಂಗ್ಯೂ ನಿಯಂತ್ರಣ
- 2025 ಅಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಶೂನ್ಯ ಸಾವು ಕಳೆದ ಆರು ವರ್ಷಗಳಲ್ಲೇ ಉತ್ತಮ ಸಾಧನೆ
Bengaluru: ಇನ್ನೇನು 2025ನೇ ವರ್ಷ ಮುಕ್ತಾಯದ ಹಂತದಲ್ಲಿರುವಾಗ ಕರ್ನಾಟಕ ಸಾರ್ವಜನಿಕ (Dengue cases decrease in Karnataka) ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ದಾಖಲಿಸಿದೆ. ಈ ವರ್ಷ ನವೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ ಡೆಂಗ್ಯೂ (Dengue) ಜ್ವರದಿಂದ ಒಂದೂ ಒಂದು ಸಾವು ವರದಿಯಾಗಿಲ್ಲ.
ಹಲವು ವರ್ಷಗಳ ನಂತರ ದೊರೆತ ಈ ಸಕಾರಾತ್ಮಕ ಫಲಿತಾಂಶ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ದೊಡ್ಡ ಉತ್ತೇಜನವಾಗಿದೆ.

ಬುಧವಾರ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಸಭೆಯಲ್ಲಿ ಮಂಡಿಸಿದ (Dengue cases decrease in Karnataka) ಅಂಕಿಅಂಶಗಳು, ಡೆಂಗ್ಯೂ ನಿಯಂತ್ರಣದಲ್ಲಿ ಕರ್ನಾಟಕ ಕೈಗೊಂಡ ಕ್ರಮಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಡೆಂಗ್ಯೂನಂತಹ ರೋಗವನ್ನು ಶೂನ್ಯ ಸಾವುಗಳೊಂದಿಗೆ ನಿಯಂತ್ರಿಸಿರುವುದು ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸುತ್ತದೆ.
ಆರೋಗ್ಯ ಸಚಿವಾಲಯ ಸಲ್ಲಿಸಿದ ವಿವರಗಳ ಪ್ರಕಾರ, 2025ರಲ್ಲಿ ನವೆಂಬರ್ ವರೆಗೆ ರಾಜ್ಯದಲ್ಲಿ ಒಟ್ಟು 6,759 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
ಆದರೆ ಈ ಎಲ್ಲ ಪ್ರಕರಣಗಳಲ್ಲಿಯೂ ಸಾವು ಸಂಭವಿಸದಿರುವುದು ವಿಶೇಷ. 2024ರ ಅಂಕಿಅಂಶಗಳೊಂದಿಗೆ ಹೋಲಿಸಿದರೆ, ಡೆಂಗ್ಯೂ ಪ್ರಕರಣಗಳಲ್ಲಿ ಸುಮಾರು ಶೇಕಡಾ 80ರಷ್ಟು ಇಳಿಕೆ ಕಂಡುಬಂದಿದೆ. ಕಳೆದ ವರ್ಷ ರಾಜ್ಯವು 32,886 ಪ್ರಕರಣಗಳು ಮತ್ತು 27 ಸಾವುಗಳನ್ನು ಕಂಡಿತ್ತು.
ಈ ಹಿನ್ನೆಲೆ ನೋಡಿದರೆ, ಒಂದೇ ವರ್ಷದಲ್ಲಿ ಸಂಭವಿಸಿದ ಈ ಭಾರೀ ಸುಧಾರಣೆ ಆರೋಗ್ಯ ಇಲಾಖೆಯ ತೀವ್ರ ಕ್ರಮಗಳ ನೇರ ಫಲವೆಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಕಳೆದ ಆರು ವರ್ಷಗಳ ಡೆಂಗ್ಯೂ ಪ್ರವೃತ್ತಿಯನ್ನು ಅವಲೋಕಿಸಿದರೆ, 2025ರ ಸಾಧನೆಯ ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ.
2019ರಲ್ಲಿ ಕರ್ನಾಟಕದಲ್ಲಿ 16,986 ಡೆಂಗ್ಯೂ ಪ್ರಕರಣಗಳು ಮತ್ತು 13 ಸಾವುಗಳು ವರದಿಯಾಗಿದ್ದವು. 2020ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿಯೇ ಪ್ರಕರಣಗಳು ಇಳಿಕೆಯಾಗಿದ್ದು 3,823 ಪ್ರಕರಣಗಳು ಮಾತ್ರ ಕಂಡುಬಂದಿದ್ದವು, ಸಾವುಗಳಿಲ್ಲ.
ಆದರೆ 2021ರಲ್ಲಿ ಮತ್ತೆ 7,393 ಪ್ರಕರಣಗಳು ಮತ್ತು ಏಳು ಸಾವುಗಳು ದಾಖಲಾಗಿದ್ದವು. 2022ರಲ್ಲಿ 9,889 ಪ್ರಕರಣಗಳು ಮತ್ತು ಒಂಬತ್ತು ಸಾವುಗಳು, 2023ರಲ್ಲಿ 19,300 ಪ್ರಕರಣಗಳು ಮತ್ತು 11 ಸಾವುಗಳು ವರದಿಯಾಗಿದ್ದವು. 2024ರಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಡೆಂಗ್ಯೂ ರಾಜ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಈ ಎಲ್ಲಾ ವರ್ಷಗಳ ಹಿನ್ನೆಲೆಯೊಂದಿಗೆ ನೋಡಿದರೆ, 2025ರ ಶೂನ್ಯ ಸಾವುಗಳು ಐತಿಹಾಸಿಕ ಸಾಧನೆ ಎಂದೇ ಹೇಳಬಹುದು.
ರಾಷ್ಟ್ರೀಯ ಮಟ್ಟದಲ್ಲಿಯೂ ಡೆಂಗ್ಯೂ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. 2025ರಲ್ಲಿ ದೇಶದಾದ್ಯಂತ ಇದುವರೆಗೆ 1,13,440 ಡೆಂಗ್ಯೂ ಪ್ರಕರಣಗಳು ಮತ್ತು 94 ಸಾವುಗಳು ವರದಿಯಾಗಿವೆ. ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದ ಆರನೇ ಸ್ಥಾನದಲ್ಲಿದೆ. ಆದರೆ ಸಾವುಗಳ ವಿಷಯದಲ್ಲಿ ಶೂನ್ಯ ಸಾಧನೆ ಮಾಡಿರುವುದು ರಾಜ್ಯಕ್ಕೆ ವಿಶಿಷ್ಟ ಗೌರವ ತಂದಿದೆ.
ಈ ವರ್ಷ ತಮಿಳುನಾಡಿನಲ್ಲಿ 12, ಮಹಾರಾಷ್ಟ್ರದಲ್ಲಿ 13 ಮತ್ತು ಕೇರಳದಲ್ಲಿ 49 ಡೆಂಗ್ಯೂ ಸಾವುಗಳು ದಾಖಲಾಗಿವೆ. ರಾಷ್ಟ್ರವ್ಯಾಪಿಯಾಗಿ 2024ರ ಇದೇ ಅವಧಿಗೆ ಹೋಲಿಸಿದರೆ, ಡೆಂಗ್ಯೂ ಪ್ರಕರಣಗಳು ಶೇಕಡಾ 49ರಷ್ಟು ಮತ್ತು ಸಾವುಗಳು ಶೇಕಡಾ 64ಕ್ಕಿಂತ ಹೆಚ್ಚು ಇಳಿಕೆಯಾಗಿವೆ.
2025ರಲ್ಲಿ ದೇಶದ ಒಟ್ಟು ಪ್ರಕರಣಗಳ ಸಾವಿನ ಪ್ರಮಾಣ ಶೇಕಡಾ 0.08ಕ್ಕೆ ಇಳಿದಿರುವುದೂ ಗಮನಾರ್ಹ.
ಡೆಂಗ್ಯೂ ನಿಯಂತ್ರಣದಲ್ಲಿ ದೊರೆತ ಈ ಒಟ್ಟಾರೆ ಯಶಸ್ಸಿಗೆ ಆರೋಗ್ಯ ಇಲಾಖೆಯ ಬಹುಮುಖ ತಂತ್ರಗಳು ಕಾರಣವೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ತೀವ್ರ ಕಣ್ಗಾವಲು ವ್ಯವಸ್ಥೆ, ಆರಂಭಿಕ ರೋಗನಿರ್ಣಯ, ಸಮಗ್ರ ವೆಕ್ಟರ್ ನಿಯಂತ್ರಣ ಕ್ರಮಗಳು, ಮನೆಮನೆಗೂ ತಲುಪಿದ ಜಾಗೃತಿ ಅಭಿಯಾನಗಳು ಮತ್ತು ಎಲ್ಲಾ ಶಂಕಿತ ರೋಗಿಗಳಿಗೆ ಉಚಿತ ಡೆಂಗ್ಯೂ ಪರೀಕ್ಷೆಗಳ ವ್ಯವಸ್ಥೆ ಈ ಸಾಧನೆಯ ಪ್ರಮುಖ ಅಂಶಗಳಾಗಿವೆ.
ಸಾರ್ವಜನಿಕರ ಸಹಕಾರವೂ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಸ್ವಚ್ಛತೆ, ನೀರು ನಿಲ್ಲದಂತೆ ನೋಡಿಕೊಳ್ಳುವುದು ಮತ್ತು ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯುವಂತಹ ಕ್ರಮಗಳು ಮುಂದುವರಿದರೆ, ಮುಂದಿನ ವರ್ಷಗಳಲ್ಲಿಯೂ ಡೆಂಗ್ಯೂನಂತಹ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವೆಂಬ ವಿಶ್ವಾಸವನ್ನು ಈ ವರ್ಷದ ಅಂಕಿಅಂಶಗಳು ನೀಡುತ್ತಿವೆ.
ಇದನ್ನು ಓದಿ : https://vijayatimes.com/ipl-2026-mini-auction/