Bengaluru: ಬಿರು ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಬೆಂಗಳೂರಿನ (Bengaluru) ಜನತೆಗೆ ಮಳೆಯ ಆಗಮನ ಸಂತೋಷದ ಜೊತೆಗೆ ಆತಂಕಕ್ಕೆ ದೂಡಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಒಂದೆರಡು ದಿನಗಳ ಅಂತರದಲ್ಲಿ ಬೆಂಗಳೂರಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಸಾವಿರದಿಂದ ಸಾವಿರದ ಐನೂರರ ಗಡಿ ದಾಟಿದೆ. ಹೀಗಾಗಿ ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲು ಪಾಲಿಕೆ ಮುಂದಾಗಿದೆ. ವಾರದ ಪ್ರತಿ ಶುಕ್ರವಾರ ಫ್ರೈ ಡೇ ಟಾಸ್ಕ್ ಹೆರಸಲ್ಲಿ ಡೆಂಘೀ ಬಗ್ಗೆ ಅರಿವು ಮೂಡಿಸುವ ಅಭಿಯಾನಕ್ಕೆ ಬಿಬಿಎಂಪಿ (BBMP) ಚಾಲನೆ ನೀಡಿದೆ.

ಈಗಾಗಲೇ ಡೆಂಘೀ (Dengue) ತಡೆಗೆ ವಾರ್ಡ್ ಗಳಿಗೆ ಬಿಬಿಎಂಪಿ ಅನುದಾನ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ (Siddaramaiah) ಬಿಬಿಎಂಪಿ ಅಧಿಕಾರಿಗಳಿಗೆ ನಗರದಲ್ಲಿ ಡೆಂಘೀ ತಡೆಗೆ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ಬಿಬಿಎಂಪಿ ನಗರದಲ್ಲಿ ಫಾಗಿಂಗ್ ಪ್ರಮಾಣವನ್ನು ಹೆಚ್ಚಿಸಿದೆ. ಜೊತೆಗೆ ಮನೆ ಮನೆ ಜಾಗೃತಿ ಅಭಿಯಾನ ಆರಂಭಿಸಿದೆ. ಅಲ್ಲದೆ ಲಾರ್ವ ನಾಶ ಸೇರಿದಂತೆ ಇತರೆ ಕ್ರಮಗಳಿಗಾಗಿ ಪ್ರತಿ ವಾರ್ಡ್ ಗಳಿಗೆ ತಲಾ 75 ಸಾವಿರ ರೂಪಾಯಿಯಂತೆ 1 ಕೋಟಿ 68 ಲಕ್ಷದ 75 ಸಾವಿರ ರೂಪಾಯಿ ಅನುದಾನವನ್ನು ಸಹ ನೀಡಿದೆ.
ಇನ್ನು ಬೊಮ್ಮನಹಳ್ಳಿ (Bommanahalli): 187,ಆರ್ ಆರ್ ನಗರ : 102,ಪೂರ್ವ : 323,ಪಶ್ಚಿಮ : 120,ದಕ್ಷಿಣ :196,ಮಹಾದೇವಪುರ : 529,ಯಲಹಂಕ : 109,
ದಾಸರಹಳ್ಳಿ : 08 ಪ್ರಕರಣಗಳು ಸೇರಿ ಬೆಂಗಳೂರಿನಲ್ಲಿ ಒಟ್ಟೂ 1500 ಗಡಿ ದಾಟಿದೆ. ಹಾಗಾಗಿ ಮನೆ ಮನೆಗೆ ಅಭಿಯಾನ ಆರಂಭಿಸಿರುವ ಪಾಲಿಕೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ವಲಯದಲ್ಲೂ ತಂಡ ರಚಿಸಿಕೊಂಡು ಡೆಂಘೀ ಜಾಗೃತಿ ಮೂಡಿಸೋಕೆ ಮುಂದಾಗಿದ್ದಾರೆ.
ಪ್ರತಿ ವಲಯದಲ್ಲೂ ಆಯಾ ವಲಯದ RMO, ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿನಿಯರು ಹಾಗೂ ಸ್ವಯಂಸೇವಕರು ಸರ್ವೇ ನಡೆಸಲಿದ್ದು, ಜನರಿಗೆ ಡೆಂಘೀ ಹರಡದಂತೆ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ಹಂಚುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ 14 ಲಕ್ಷ ಮನೆಗಳಿಗೆ ಭೇಟಿ ನೀಡುವ ಟಾರ್ಗೆಟ್ ಬಿಬಿಎಂಪಿ ಹೊಂದಿದ್ದು, ಈ ವೇಳೆ ಯಾರಿಗಾದ್ರೂ ಜ್ವರದ ಲಕ್ಷಣ ಇದ್ರೆ ವೈದ್ಯಕೀಯ ನೆರವನ್ನೂ ಪಾಲಿಕೆ ಸ್ಥಳದಲ್ಲೇ ನೀಡಲಿದೆ ಎಂದು ಹೇಳಿದೆ.