ಹೊಸದಿಲ್ಲಿ, ಜ. 04: ದೇಶದಲ್ಲಿ ರೂಪಾಂತರಿ ಕೊರೊನಾ ಆತಂಕದ ನಡುವೆಯೇ, ದೇಶದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ನಡೆಸಲಾಗಿದ್ದು, ಇದರ ಬೆನ್ನಲ್ಲೇ ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಣ ಇಲಾಖೆ (ಡಿಸಿಜಿಐ) ಶಿಫಾರಸು ಮಾಡಲಾಗಿದೆ.
ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಜಿಐ
ಅಧ್ಯಕ್ಷ ವಿ.ಜಿ.ಸೋಮಾನಿ, ಲಸಿಕೆ ಸಂಬಂಧ 2 ಕಂಪನಿಗಳು ದಾಖಲೆಗಳನ್ನು ಸಲ್ಲಿಸಿವೆ. 2ನೇ ಹಾಗೂ 3ನೇ ಹಂತದ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದ್ದು, ತಜ್ಞರ ಸಲಹೆ ಮೇರೆಗೆ ತುರ್ತು ಸಂದರ್ಭದಲ್ಲಿ ಈ ಲಸಿಕೆಯನ್ನು ಬಳಸುವಂತೆ ಸೂಚಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ದೊರೆತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದಕ್ಕಾಗಿ ಶ್ರಮಿಸಿದ ವಿಜ್ಞಾನಿಗಳು ಸೇರಿದಂತೆ ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.