ಮುಂಬರುವ ವಿಧಾನಸಭಾ ಚುನಾವಣೆಯ(Vidhansabha Election 2022) ದೃಷ್ಟಿಯಿಂದ ಜೆಡಿಎಸ್(JDS) ಪಕ್ಷ ರೂಪಿಸುತ್ತಿರುವ ತಂತ್ರಗಾರಿಕೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಕಾಂಗ್ರೆಸ್(Congress) ಪಕ್ಷದ ಪ್ರಬಲ ಅಲ್ಪಸಂಖ್ಯಾತ ನಾಯಕ ಎಂದೇ ಗುರುತಿಸಿಕೊಂಡಿದ್ದ, ಸಿಎಂ ಇಬ್ರಾಹಿಂ(CM Ibrahim) ಅವರನ್ನು ಪಕ್ಷಕ್ಕೆ ಕರೆತಂದ ನಂತರ ಜೆಡಿಎಸ್ ಅಲ್ಪಸಂಖ್ಯಾತ ಮತಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಜೆಡಿಎಸ್ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ನೀಡುತ್ತಿರುವ ಹೇಳಿಕೆಗಳು, ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಹಿಂದೆ ಚುನಾವಣೆ ತಂತ್ರಗಾರಿಕೆ ಅಡಗಿದೆ.

ಪ್ರಬಲ ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯಲು ಕುಮಾರಣ್ಣ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಈ ಪ್ರಯತ್ನದ ಭಾಗವಾಗಿ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿ ಎಚ್.ಡಿ.ದೇವೇಗೌಡರು ಆದೇಶ ಹೊರಡಿಸಿದ್ದಾರೆ. ಇನ್ನು ಮುಸ್ಲಿಂ ಸಮುದಾಯವನ್ನು ತನ್ನತ್ತ ಸೆಳೆದರೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಆದರೆ ಬೆಂಗಳೂರು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬಹುದು.
ಜೆಡಿಎಸ್ ಪಕ್ಷ ಇದೀಗ ತನ್ನ ಗೆಲುವಿನ ಕಡೆ ಗಮನ ನೀಡುವುದರ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಸೋಲಿಸುವತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಕಾಂಗ್ರೆಸ್ ಪಕ್ಷದ ಮತಗಳಿಕೆಯನ್ನು ಕಡಿಮೆ ಮಾಡಿದರೆ ಅದರ ನೇರ ಲಾಭ ಜೆಡಿಎಸ್ ಪಕ್ಷಕ್ಕಾಗುತ್ತದೆ. ವಿಧಾನಸಭೆಯಲ್ಲಿ ಸರಳ ಬಹುಮತ ತಲುಪಲು ಮೂರು ಪಕ್ಷಗಳಿಗೂ ಸಾಧ್ಯವಾಗದಿದ್ದರೆ, ಕಾಂಗ್ರೆಸ್ ಮತ್ತು ಬಿಜೆಪಿಗೆ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಅನಿವಾರ್ಯವಾಗುತ್ತದೆ. ಆಗ ಎಂದಿನಂತೆ ಜೆಡಿಎಸ್ ‘ಕಿಂಗ್ ಮೇಕರ್’ ಆಗುತ್ತದೆ. ಹೀಗಾಗಿ ಜೆಡಿಎಸ್, ಕಾಂಗ್ರೆಸ್ ಮತಗಳನ್ನು ಕಡಿಮೆ ಮಾಡುವ ಮೂಲಕ ತಾನು ‘ಕಿಂಗ್ ಮೇಕರ್’ ಆಗುವ ಕನಸು ಕಾಣುತ್ತಿದೆ.
ಇನ್ನು ಸದ್ಯ ರಾಜ್ಯದಲ್ಲಿ ಮೂರು ಪಕ್ಷಗಳಿಗೂ ಬಹುಮತ ಪಡೆಯುವಷ್ಟು ಸ್ಥಾನ ಲಭಿಸುವುದು ಕಷ್ಟಸಾಧ್ಯ. 150 ಸ್ಥಾನಗಳನ್ನು ಗೆಲ್ಲುವ ದೃಷ್ಟಿಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಭಾರೀ ಪ್ರಯತ್ನಗಳನ್ನೇ ನಡೆಸಿವೆ. ಆದರೆ ಈ ಹಿಂದಿನ ಚುನಾವಣೆಗಳು ಮತ್ತು ಮತಗಳಿಕೆಯನ್ನು ಗಮನಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕೂದಲೆಳೆ ಅಂತರದಷ್ಟು ಮತಗಳಿಕೆ ಅಂತರವಿದೆ. ರಾಜ್ಯದಲ್ಲಿ ಜಾತಿ ಸಮೀಕರಣ ಹೆಚ್ಚು ಕೆಲಸ ಮಾಡುವುದರಿಂದ ಹೆಚ್ಚಿನ ವ್ಯತ್ಯಾಸ ಸಾಧ್ಯವಾಗುವುದಿಲ್ಲ. ಸಣ್ಣಸಣ್ಣ ಜಾತಿಗಳು ಅನೇಕ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

ಹೀಗಾಗಿ ಚುನಾವಣೆಯ ಕೊನೆಯಲ್ಲಿ ರೂಪಿಸುವ ತಂತ್ರಗಾರಿಕೆ ಹೆಚ್ಚಿನ ಫಲ ನೀಡಲಿದೆ. ಉತ್ತರಕರ್ನಾಟಕದ ಭಾಗದಲ್ಲಿ ಜೆಡಿಎಸ್ ದುರ್ಬಲವಾಗಿದೆ. ಆದರೆ ಈ ಬಾರಿ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಅಲ್ಪಸಂಖ್ಯಾತ ಮತಗಳನ್ನು ಸೆಳೆದರೆ ಆ ಭಾಗದಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಹೀಗಾಗಿಯೇ ಜೆಡಿಎಸ್ ಅಲ್ಪಸಂಖ್ಯಾತ ಮತಗಳಿಕೆಯತ್ತ ಹೆಚ್ಚಿನ ಗಮನ ಹರಿಸಿ, ಮುಸ್ಲಿಂ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಇನ್ನೊಂದು ಹೆಜ್ಜೆ ಮುಂದಡಿ ಇಟ್ಟಿದ್ದಾರೆ ದಳಪತಿಗಳು. ಜೆಡಿಎಸ್ ರೂಪಿಸುತ್ತಿರುವ ಈ ಎಲ್ಲ ತಂತ್ರಗಾರಿಕೆಗಳು ಎಷ್ಟರ ಮಟ್ಟಗೆ ಫಲ ನೀಡುತ್ತವೆ ಎಂಬುದನ್ನು ಕಾದು ನೋಡಬೇಕಿದೆ.