ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಧೋನಿ ಅಭಿಮಾನಿಗಳಲ್ಲಿ ತಮ್ಮ ನೆಚ್ಚಿನ ಆಟಗಾರನ ನಿವೃತ್ತಿ ಕುರಿತು ಚರ್ಚೆ, ಕುತೂಹಲವೊಂದನ್ನು ಹುಟ್ಟುಹಾಕಿದೆ.
ವಿಶ್ವ ಕ್ರಿಕೆಟ್ನಲ್ಲಿ 16 ವರ್ಷಗಳ ಕಾಲ ಮಿಂಚಿದ್ದ ಮಹೇಂದ್ರ ಸಿಂಗ್ ಧೋನಿ, ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ತಮ್ಮ ನಿವೃತ್ತಿ ಘೋಷಿಸುತ್ತಾರೆಂದು ಯಾರೊಬ್ಬರೂ ಊಹಿಸಿರಲಿಲ್ಲ. ಅನಿರೀಕ್ಷಿತವಾಗಿ ಬಂದ ಈ ಸುದ್ದಿ, ಟೀಂ ಇಂಡಿಯಾ ಆಟಗಾರರು ಸೇರಿದಂತೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಇನ್ನೂ ಧೋನಿ ಅಭಿಮಾನಿಗಳ ಪಾಲಿಕೆ ಈ ಸುದ್ದಿ ದೊಡ್ಡ ಆಘಾತವನ್ನೇ ಮೂಡಿಸಿತ್ತು.
ತಾವು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿರುವ ವಿಷಯವನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡ ಧೋನಿ, 19:29 ರಿಂದ ಅನ್ವಯವಾಗುವಂತೆ ನಿವೃತ್ತಿ ಘೋಷಿಸಿರುವುದಾಗಿ ಉಲ್ಲೇಖಿಸಿದ್ದರು.
ಆದರೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಮಾಡಿದ್ದ ಮೆಸೇಜ್ನಲ್ಲಿದ್ದ ‘1929’ ಸಂಖ್ಯೆ ಎಲ್ಲರ ಗಮನ ಸೆಳೆಯುವ ಜತೆಗೆ, ದೊಡ್ಡ ಕುತೂಹಲವೊಂದನ್ನು ಹುಟ್ಟಿಹಾಕಿತ್ತು. ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ, ಕಾಶಿ ವಿಶ್ವನಾಥನ್ ಅವರ ಮಾಲೀಕ ಎನ್.ಶ್ರೀನಿವಾಸ್ ಅವರಿಗೂ ಈ ವಿಷಯದಲ್ಲಿ ಕುತೂಹಲ ಮೂಡಿಸಿದೆ.
ಬಳಿಕ ಈ ವಿಷಯದ ಕುರಿತಂತೆ ಕಾರಣ ಹುಡುಕಲಾರಂಭಿಸಿದ ವಿಶ್ವನಾಥ್, “ದಕ್ಷಿಣ ಭಾರತದ ಬಹುತೇಕ ಕಡೆಗಳಲ್ಲಿ 19:29ರ ಸಮಯದಲ್ಲಿ ಸೂರ್ಯಾಸ್ತವಾಗುವ ಸಮಯವಾಗಿದ್ದು, ಈ ಕಾರಣದಿಂದ ಧೋನಿ ಇದೇ ಸಮಯದಲ್ಲಿ ನಿವೃತ್ತಿ ಘೋಷಿಸಿದ್ದಾರೆ ಎಂಬ ಉತ್ತರ ಕಂಡುಕೊಂಡಿದ್ದಾರೆ.
ಆದರೆ ಧೋನಿ ಅಭಿಮಾನಿಗಳು ಮಾತ್ರ ಈ ವಿಷಯದಲ್ಲಿ ತಮ್ಮದೇ ಲೆಕ್ಕಾಚಾರಗಳನ್ನು ಹಾಕಿದ್ದಾರೆ. ಧೋನಿ 2019ರ ವಿಶ್ವಕಪ್ನ ಟೂರ್ನಿಯಲ್ಲಿ ನ್ಯೂಜಿ಼ಲ್ಯಾಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಕೊನೆಯ ಏಕದಿನ ಪಂದ್ಯವಾಡಿದ್ದರು. ಈ ಪಂದ್ಯದಲ್ಲಿ ಭಾರತ ಸೋತಾಗ ರಾತ್ರಿ 19.29 ನಿಮಿಷವಾಗಿತ್ತು. ಆ ಕಾರಣದಿಂದ ಧೋನಿ 19:29ರಲ್ಲಿ ತಮ್ಮ ನಿವೃತ್ತಿ ಘೋಷಿಸಿದ್ದಾರೆ ಎಂಬ ಉತ್ತರ ಹುಡುಕಿದ್ದಾರೆ.
ಇನ್ನೂ ಕೆಲವು ಅಭಿಮಾನಿಗಳ ಪ್ರಕಾರ, ಧೋನಿ ಧರಿಸುತ್ತಿದ್ದ ಜರ್ಸಿ ಸಂಖ್ಯೆ 7 ಹಾಗೂ ಸುರೇಶ್ ರೈನಾ ಧರಿಸುತ್ತಿದ್ದ ಜರ್ಸಿ ಸಂಖ್ಯೆ 3. ಹೀಗಾಗಿ ಎರಡನ್ನೂ ಸೇರಿಸಿದರೆ 73 ಆಗಲಿದ್ದು, ಭಾರತ ಸಹ 73 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಪೂರ್ಣಗೊಳಿಸಿದೆ. ಇದುವೆ ಧೋನಿ ನಿವೃತ್ತಿ ಘೋಷಣೆಯಲ್ಲಿ ಉಲ್ಲೇಖವಾದ 19:29 ಸಂಖ್ಯೆಯ ಉದ್ದೇಶ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಧೋನಿ ಕ್ರಿಕೆಟ್ನಿಂದ ನಿವೃತ್ತಿ ಪಡೆದರೂ, ನಿವೃತ್ತಿ ಹಿಂದಿನ ಕುತೂಹಲ ಮಾತ್ರ ಕಡಿಮೆಯಾಗಿಲ್ಲ.